ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ. ರೈತರು ಮತ್ತು ಕೇಂದ್ರ ಸರ್ಕಾರದ ಜೊತೆಗಿನ 5ನೇ ಸುತ್ತಿನ ಮಾತುಕತೆಯೂ ವಿಫಲವಾಗಿದ್ದು, ಪ್ರತಿಭಟನೆ ಮುಂದುವರೆದಿದೆ.
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುತ್ತೀರೋ?, ಇಲ್ಲವೋ? ಎಂಬುದಕ್ಕೆ ಹೌದು ಅಥವ ಇಲ್ಲ ಎಂಬ ಉತ್ತರ ಕೊಡಬೇಕು ಎಂದು ಸಭೆಯಲ್ಲಿ ರೈತರು ಫಲಕವನ್ನು ಹಿಡಿದು ಕೂತಿದ್ದರು. ಇದರಿಂದಾಗಿ ಮಾತುಕತೆ ವಿಫಲವಾಗಿದೆ. ರೈತರು ಡಿಸೆಂಬರ್ 8ರಂದು ಭಾರತ್ ಬಂದ್‌ಗೆ ಸಹ ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರ ರೈತರ ಪ್ರತಿಭಟನೆ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶವನ್ನು ಕರೆಯುವ ಕುರಿತು ಚಿಂತನೆ ನಡೆಸಿದೆ. ಆದರೆ, ಈ ಬಗ್ಗೆ ಅಂತಿಮ ತೀರ್ಮಾನವನ್ನು ಇನ್ನೂ ಕೈಗೊಳ್ಳಬೇಕಿದೆ. ದಿನದಿಂದ ದಿನಕ್ಕೆ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಸರ್ಕಾರದ ಯಾವುದೇ ಷರತ್ತು ಬದ್ಧ ಮಾತುಕತೆಗೆ ಅವರು ಒಪ್ಪಿಗೆ ಕೊಡುತ್ತಿಲ್ಲ.
ಲೋಕಸಭೆಯ ಕಾಂಗ್ರೆಸ್ ನಾಯಕ ರಂಜನ್ ಚೌಧರಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರವನ್ನು ಬರೆದಿದ್ದಾರೆ. ಮಹತ್ವದ ವಿಚಾರದ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ನೇತೃತ್ವದಲ್ಲಿ ಶನಿವಾರ ರೈತರ ಜೊತೆ ನಡೆದ ಸಭೆಯಲ್ಲಿ 40 ರೈತರು ಪಾಲ್ಗೊಂಡಿದ್ದರು. ಸುಮಾರು 5 ಗಂಟೆಗಳ ಕಾಲ ಸಭೆ ನಡೆಯಿತು. ರೈತರು ಇಟ್ಟ ಬೇಡಿಕೆಗಳ ಬಗ್ಗೆ ಆಂತರಿಕವಾಗಿ ಚರ್ಚೆ ನಡೆಸಲು ಸಾಕಷ್ಟು ಕಾಲಾವಕಾಶ ಬೇಕು ಎಂದು ಸರ್ಕಾರ ಹೇಳಿತು.
ಶನಿವಾರದ ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ರೈತರ ಪ್ರತಿಭಟನೆ ಬಗ್ಗೆ ಸಂಪುಟದ ಹಿರಿಯ ಸಹೋದ್ಯೋಗಿಗಳ ಜೊತೆ ಮಾತುಕತೆ ನಡೆಸಿದರು. ಅಮಿತ್ ಶಾ, ರಾಜನಾಥ್ ಸಿಂಗ್, ಪಿಯೂಷ್ ಘೋಯೆಲ್ ಸೇರಿದಂತೆ ಹಲವಾರು ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೂರು ಕಾಯ್ದೆಗಳನ್ನು ರದ್ದುಗೊಳಿಸಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಲು ಕಾಯ್ದೆ ರೂಪಿಸಿ ಎಂಬುದು ಒಂದೇ ನಮ್ಮ ಬೇಡಿಕೆಯಾಗಿದೆ ಎಂದು ರಾಷ್ಟ್ರೀಯ ಕಿಸಾನ್ ಮಹಾಸಂಘ ಹೇಳಿದೆ.
"ಇಂದಿನ ಸಭೆಯಲ್ಲಿ ರೈತರನ್ನು ಪ್ರತಿನಿಧಿಸುವ ಸಂಘಟನೆಗಳ ಪ್ರಮುಖರಿಂದ ಹಲವಾರು ಸಲಹೆಗಳು ಸಿಕ್ಕಿವೆ. ಇದರಿಂದಾಗಿ ಸಮಸ್ಯೆಗೆ ಪರಿಹಾರ ಕಂಡುಹಿಡಿಲು ಅನುಕೂಲವಾಗಿದೆ. ಡಿಸೆಂಬರ್ 9ರಂದು ಮತ್ತೊಮ್ಮೆ ನಾವು ಸಭೆ ಸೇರಲಿದ್ದೇವೆ" ಎಂದು ನರೇಂದ್ರ ಸಿಂಗ್ ಥೋಮರ್ ಹೇಳಿದ್ದಾರೆ.