ಕೋಝಿಕ್ಕೋಡ್ ಕೇಂದ್ರ ತನಿಖಾ ಸಂಸ್ಥೆಗಳನ್ನು ಕೇರಳಕ್ಕೆ ಸ್ವತಃ ಮುಖ್ಯಮಂತ್ರಿಯೇ ಕರೆಸಿಕೊಂಡಿದ್ದಾರೆ ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಲೀಧರನ್ ಹೇಳಿದ್ದಾರೆ. ಆದರೆ ಈಗ ಇದನ್ನು ಸ್ವೀಕರಿಸಲು ಸಿಎಂ ಸಿದ್ಧರಿಲ್ಲ. ಮೊದಲು ವಿಚಾರಣೆಗಾಗಿ ಬೇಡಿಕೆ ಇರಿಸಿದ್ದ ಮುಖ್ಯಮಂತ್ರಿ ಈಗ ಏಕೆ ಚಿಂತೆ ಮಾಡುತ್ತಿದ್ದಾರೆ ಎಂದು ಮುರಲೀಧರನ್ ಕೇಳಿದರು.
ಕೇರಳದಲ್ಲೂ ಕಾಂಗ್ರೆಸ್ಸಿನ ವೈಭವದ ದಿನಗಳು ಕುಸಿಯುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ. ಕಾಂಗ್ರೆಸ್ ನ್ನು ಹೆಚ್ಚಾಗಿ ಬೆಂಬಲಿಸಿದ ಕ್ರಿಶ್ಚಿಯನ್ ವಲಯವೂ ಸೇರಿದಂತೆ ಎಲ್ಲರೂ ಅವರನ್ನು ಕೈಬಿಡುತ್ತಿದೆ. ಭಯೋತ್ಪಾದಕ ಸಂಘಟನೆಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಕಾಂಗ್ರೆಸ್ ನಿರ್ಧಾರವು ಕ್ರಿಶ್ಚಿಯನ್ ವರ್ಗಗಳಲ್ಲಿ ಆತಂಕವನ್ನುಂಟು ಮಾಡಿದೆ. ಈ ಚುನಾವಣೆಯ ಫಲಿತಾಂಶಗಳು ಸಾಮಾನ್ಯ ಕಾಂಗ್ರೆಸ್ಸಿಗರು ಉಗ್ರಗಾಮಿ ಸಂಘಟನೆಗಳೊಂದಿಗಿನ ಸಂಪರ್ಕವನ್ನು ಹೊಂದಿರುವ ಕಾಂಗ್ರೆಸ್ ಬೆಂಬಲಿಸಲು ಮುಂದಾಗರು ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್‍ನಿಂದ ಅನೇಕ ಜನರು ಶೀಘ್ರದಲ್ಲೇ ಬಿಜೆಪಿಗೆ ಸೇರುತ್ತಾರೆ ಎಂದು ಹೇಳಿದರು.
ರೈತರ ಆಂದೋಲನ ದೇಶವ್ಯಾಪಿಯಾಗಿ ನಡೆಯುತ್ತಿಲ್ಲ. ಕೇರಳದ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದೆ. ಹೊಸ ರೈತ ಕಾಯ್ದೆಯಿಂದ ರೈತರು ತಮ್ಮ ಬೆಳೆಗಳನ್ನು ನೇರವಾಗಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಇದು ರೈತರ ವಿರುದ್ಧ ಹೇಗೆ ಆಗಬಹುದು ಎಂದು ಸಚಿವರು ಕೇಳಿದರು. ಹಣದ ಶಕ್ತಿಯಿಂದ ಮಾತ್ರ ಜನರ ಮನಪೋಲಿಸಬಹುದು ಎಂದು ಸಿಪಿಎಂ ಯಾವಾಗಲೂ ಯೋಚಿಸಬಾರದು ಎಂದವರು ತಿಳಿಸಿದರು. ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯು ಪೂರ್ಣಗೊಂಡ ಬಳಿಕವಷ್ಟೇ ತನಿಖಾ ಸಂಸ್ಥೆಗಳು ಮರಳುವುದು. ಇದರ ಹಿಂದೆ ಯಾರು ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. "ಇದು ನಮ್ಮ ಗಮನಕ್ಕೆ" ಬಂದಿದೆ ಎಂದವರು ತಿಳಿಸಿರುವರು.