ನವದೆಹಲಿ: ಗಡಿಯಲ್ಲಿ ಉದ್ಭವಿಸಿರುವ ಸಂಘರ್ಷಮಯ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಭಾರತ-ಚೀನಾ ನಡುವೆ ಮಾತುಕತೆಗಳು ಮುಂದುವರಿದಿರುವ ನಡುವೆಯೇ, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಬುಧವಾರ ಪೂರ್ವ ಲಡಾಖ್‌ನ ಗಡಿಗೆ ಭೇಟಿ ನೀಡಿದರು.
ಗಡಿಯಲ್ಲಿನ ಮುಂಚೂಣಿ ಠಾಣೆಗಳಿಗೆ ಭೇಟಿ ನೀಡಿದ ಅವರು, ಸೇನೆಯ ಸನ್ನದ್ಧತೆಯನ್ನು ಪರಿಶೀಲಿಸಿದರು.
ರೆಚಿನ್ ಲಾದಲ್ಲಿನ ಮುಂಚೂಣಿ ಠಾಣೆಗೆ ಭೇಟಿ ನೀಡಿದ ಜ. ನರವಣೆ ಅವರು, ವಾಸ್ತವ ನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಪರಿಸ್ಥಿತಿಯನ್ನು ಅವಲೋಕಿಸಿದರು ಎಂದು ಸೇನಾ ಮೂಲಗಳು ಹೇಳಿವೆ.
ಪೂರ್ವ ಲಡಾಖ್ ಗಡಿಯಲ್ಲಿರುವ ಪರ್ವತಗಳಿಂದ ಕೂಡಿದ ಪ್ರದೇಶಗಳಲ್ಲಿ ಮುಂಚೂಣಿ ಠಾಣೆಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಅತ್ಯಂತ ಕಡಿಮೆ ಉಷ್ಣಾಂಶವೂ ಇದೆ. ಸೇನೆಯು ಇಲ್ಲಿ 50,000 ಯೋಧರನ್ನು ನಿಯೋಜನೆ ಮಾಡಿದೆ. ಚೀನಾ ಸಹ ತನ್ನ ಗಡಿಯಲ್ಲಿ ಇಷ್ಟೇ ಸಂಖ್ಯೆಯ ಯೋಧರನ್ನು ಜಮಾಯಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೇಹ್‌ನಲ್ಲಿನ 14 ಕಾರ್ಪ್ಸ್‌ನ ಕಮಾಂಡರ್ ಲೆ.ಜ ಪಿ.ಜಿ.ಕೆ.ಮೆನನ್ ಅವರು ಗಡಿಯಲ್ಲಿನ ಪರಿಸ್ಥಿತಿ ಕುರಿತಂತೆ ಮಾಹಿತಿ ನೀಡಿದರು.
ದುರ್ಗಮ ಪ್ರದೇಶಗಳಲ್ಲಿ ನಡೆಯುವ ಕದನಗಳಲ್ಲಿ ವೈರಿ ಪಡೆಗೆ ತಕ್ಕ ಉತ್ತರ ನೀಡುವ ಬಲಿಷ್ಠ ತುಕಡಿ 14 ಕಾರ್ಪ್ಸ್. ಹೀಗಾಗಿ ಇದಕ್ಕೆ 'ಫೈರ್ ಆಯಂಡ್ ಫ್ಯೂರಿ ಕಾರ್ಪ್ಸ್' ಎಂದು ಕರೆಯಲಾಗುತ್ತದೆ.