ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಗಾದಿ ಯಾರಿಗೆ ಎಂಬ ವಿಚಾರ ಕುತೂಹಲ ಕೆರಳಿಸಿದೆ. ಈ ಬಾರಿಯ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಕೇರಳದಲ್ಲಿ ಉತ್ತರದಲ್ಲಿರುವ ಮಂಜೇಶ್ವರ ತಾಲೂಕಿನ ಹಲವು ಗ್ರಾ.ಪಂ ಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕ್ಲಿಷ್ಟಕರವಾಗಿದೆ. ಉತ್ತರದ ಮೀಂಜಾ, ಮಂಜೇಶ್ವರ, ವರ್ಕಾಡಿ ಸಹಿತ ಪೈವಳಿಕೆ ಗ್ರಾ.ಪಂಗಳಲ್ಲಿ ಯಾವ ಪಕ್ಷಕ್ಕೂ ನಿರ್ದಿಷ್ಟ ಬಹುಮತ ಇಲ್ಲದೇ ಇರುವುದು ಗ್ರಾ.ಪಂ ಅಧ್ಯಕ್ಷರ ಆಯ್ಕೆಯನ್ನು ಬೆರಗು ಕಣ್ಣಿನಿಂದ ನೋಡುವಂತೆ ಮಾಡಿದೆ.
ಮಂಜೇಶ್ವರ ಬ್ಲಾಕ್ ಪಂಚಾಯತಿಗೆ ಒಟ್ಟು 15 ಸ್ಥಾನಗಳಿದ್ದು, ಬಹುಮತಕ್ಕೆ 8 ಸ್ಥಾನಗಳು ಅತ್ಯಗತ್ಯವಾಗಿದೆ. ಆದರೆ ಈ ಬಾರಿಯ ಸ್ಥಳೀಯಾಡಳಿತ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಇರುವುದು ಅಧ್ಯಕ್ಷರ ಆಯ್ಕೆಯನ್ನು ಕಠಿಣವಾಗಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಬ್ಲಾಕ್ ಅಭ್ಯರ್ಥಿಗಳಾಗಿ ಬಿಜೆಪಿ-6, ಐಕ್ಯರಂಗ-6, ಎಡರಂಗ-2, ಒಂದು ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ.
ಸ್ವತಂತ್ರ ಅಭ್ಯರ್ಥಿಯ ಬೆಂಬಲ ಸಾಲದು!:
ಮಂಜೇಶ್ವರ ಬ್ಲಾಕ್ ಪಂಚಾಯತ್ ಆಡಳಿತ ನಡೆಸಲು ಬಿಜೆಪಿ ಮತ್ತು ಐಕ್ಯರಂಗಕ್ಕೆ ಹೆಚ್ಚಿನ ಸಾಧ್ಯತೆಗಳಿವೆ. ಆದರೆ ಏಕಮೇವ ಸ್ಥಾನ ಜಯಿಸಿರುವ ಸ್ವಾತಂತ್ರ್ಯ ಅಭ್ಯರ್ಥಿಯ ಬೆಂಬಲ ಸಾಲದು. ಆದರೆ ಎರಡು ಸ್ಥಾನಗಳನ್ನು ಜಯಿಸಿರುವ ಎಡರಂಗವು ಯಾರಿಗೆ ಬೆಂಬಲ ಸೂಚಿಸುತ್ತದೆ ಎಂಬುದನ್ನು ಜನಸಾಮಾನ್ಯರು ಅಚ್ಚರಿಯಿಂದ ನೋಡುತ್ತಿದ್ದಾರೆ.
ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಸ್ಥಳಿಯಾಡಳಿತ ಚುನಾವಣೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿಗೆ ಆಯ್ಕೆಯಾದ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಿದೆ. 2015 ರ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ 4 ಸ್ಥಾನಗಳಿದ್ದವು, ಐಕ್ಯರಂಗಕ್ಕೆ ಒಟ್ಟು 9 ಸ್ಥಾನಗಳು ಪ್ರಾಪ್ತವಾಗಿದ್ದವು ಮಾತ್ರವಲ್ಲ ಬಹುಮತವೂ ಲಭಿಸಿತ್ತು. ಎಡರಂಗವು ಕೇವಲ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.
ಉತ್ತರದ ಮೂರು ಗ್ರಾಮ ಪಂಚಾಯತಿಗಳಲ್ಲಿ ಅತಂತ್ರ ಸ್ಥಿತಿ ಅಧ್ಯಕ್ಷರ ಆಯ್ಕೆ ಕಠಿಣ:
ಮಂಜೇಶ್ವರ-ಗ್ರಾಮ ಪಂಚಾಯಿತಿಗೆ ಒಟ್ಟು 21 ಸ್ಥಾನಗಳಿದ್ದು, ಈ ಬಾರಿಯ ಅಧ್ಯಕ್ಷರ ಆಯ್ಕೆ ಸ್ವಾತಂತ್ರ್ಯರ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ಐಕ್ಯರಂಗಕ್ಕೆ ಒಟ್ಟು 6 ಸ್ಥಾನಗಳು ದಕ್ಕಿದ್ದರೆ ಬಿಜೆಪಿಗೆ ತೆಕ್ಕೆಗೂ ಒಟ್ಟು ಆರು ಸ್ಥಾನಗಳು ಲಭ್ಯವಾಗಿವೆ. ಬಹುಮತಕ್ಕೆ ಒಟ್ಟು 11 ಸ್ಥಾನಗಳ ಅಗತ್ಯವಿದ್ದು, ಒಟ್ಟು 7 ಸ್ಥಾನಗಳನ್ನು ಗೆದ್ದಿರುವ ಸ್ವಾತಂತ್ರ್ಯ ಅಭ್ಯರ್ಥಿಗಳೇ ನಿರ್ಣಾಯಕವಾಗಲಿದ್ದಾರೆ. ಕೇವಲ ಎರಡು ಸ್ಥಾನಗಳು ಎಡರಂಗಕ್ಕೆ ಒಲಿದಿವೆ.
ವರ್ಕಾಡಿ- ಒಟ್ಟು 16 ಸ್ಥಾನಗಳನ್ನು ಹೊಂದಿರುವ ವರ್ಕಾಡಿ ಗ್ರಾಮ ಪಂಚಾಯತಿನಲ್ಲಿಯೂ ಸ್ಪಷ್ಟ ಬಹುಮತ ಯಾರಿಗೂ ಲಭಿಸದೆ ಇರುವುದರಿಂದ ಅಧ್ಯಕ್ಷರ ಆಯ್ಕೆ ಕ್ಲಿಷ್ಟಕರವಾಗಿದೆ. ಐಕ್ಯರಂಗ-4, ಎಡರಂಗ-5, ಎನ್.ಡಿ.ಎ-5 ಹಾಗೂ ಸ್ವಾತಂತ್ರ್ಯ ಅಭ್ಯರ್ಥಿಗಳು ಒಟ್ಟು 2 ಸ್ಥಾನಗಳನ್ನು ಜಯಿಸಿದ್ದಾರೆ. ಕಳೆದ ಬಾರಿ ಐಕ್ಯರಂಗವು ಒಟ್ಟು 7 ಸ್ಥಾನಗಳನ್ನು ಜಯಿಸಿದ್ದು, ಇಬ್ಬರು ಸ್ವಾತಂತ್ರ್ಯ ಅಭ್ಯರ್ಥಿಗಳ ಸಹಾಯದೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿತ್ತು, ಅಬ್ದುಲ್ ಮಜೀದ್ ಬಿ.ಎ ಗ್ರಾ.ಪಂ ಅಧ್ಯಕ್ಷರಾಗಿದ್ದರು.
ಮೀಂಜ- ಗ್ರಾಮ ಪಂಚಾಯತಿಯಲ್ಲೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಒಟ್ಟು 15 ಸ್ಥಾನಗಳಿರುವ ಇಲ್ಲಿ ಬಹುಮತಕ್ಕೆ 8 ಸ್ಥಾನಗಳನ್ನು ಯಾವುದಾದರೊಂದು ಪಕ್ಷ ಜಯಿಸಬೇಕಿತ್ತು.
ಆದರೆ ಈ ಬಾರಿ ಐಕ್ಯರಂಗ-3, ಎಡರಂಗ-4, ಬಿಜೆಪಿ-6 ಹಾಗೂ ಸ್ವಾತಂತ್ರ್ಯ ಅಭ್ಯರ್ಥಿಗಳು-2 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ಕಳೆದ ಬಾರಿ ಒಟ್ಟು 7 ಸ್ಥಾನಗಳನ್ನು ಜಯಿಸಿದ್ದ ಐಕ್ಯರಂಗವು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಸಂಶಾದ್ ಶುಕೂರ್ ಗ್ರಾ.ಪಂ ಅಧ್ಯಕ್ಷೆಯಾಗಿದ್ದರು.
ಪೈವಳಿಕೆ- ಯಾರಿಗೂ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಪೈವಳಿಕೆಯಲ್ಲೂ ಅಧ್ಯಕ್ಷರ ಆಯ್ಕೆ ಕಷ್ಟಕರವಾಗಿದೆ. ಒಟ್ಟು 19 ಸ್ಥಾನಗಳಿರುವ ಈ ಪಂಚಾಯತಿನಲ್ಲಿ ಈ ಬಾರಿ ಬಿಜೆಪಿ-8, ಐಕ್ಯರಂಗ-3 , ಎಡರಂಗ-7, ಸ್ವಾತಂತ್ರ್ಯ-1 ಸ್ಥಾನಗಳನ್ನು ಜಯಿಸಿದೆ.
ಕಳೆದ ಬಾರಿ(2015 ರಲ್ಲಿ) ಬಿಜೆಪಿ-8, ಐಕ್ಯರಂಗ-4, ಎಡರಂಗ-7 ಸ್ಥಾನಗಳನ್ನು ಪಡೆದಿತ್ತು. ಎಡರಂಗ ಐಕ್ಯರಂಗದ ಮೈತ್ರಿ ಮೂಲಕ ಐದು ವರ್ಷ ಭರಿಸಲಾಗಿದ್ದು, ಭಾರತಿ.ಜೆ ಶೆಟ್ಟಿ ಅಧ್ಯಕ್ಷೆಯಾಗಿದ್ದರು. ಕೆಲ ಗ್ರಾ.ಪಂ ಗಳಲ್ಲಿ ಎಸ್.ಸಿ ಹಾಗೂ ಇನ್ನೂ ಕೆಲ ಗ್ರಾ.ಪಂ ಗಳಲ್ಲಿ ಮಹಿಳಾ ಮೀಸಲು ಅಧ್ಯಕ್ಷ ಸ್ಥಾನವಿರುವ ಕಾರಣ ಅಧ್ಯಕ್ಷರ ಆಯ್ಕೆ ಮತ್ತೂ ಕ್ಲಿಷ್ಟವಾಗಿದೆ.