ಪೆರ್ಲ: ಜಿಲ್ಲೆಯ ಗಡಿ ಗ್ರಾಮ ಪಂಚಾಯತಿಯಾದ ಎಣ್ಮಕಜೆ ಪಂಚಾಯಿತಿ ಅಧ್ಯಕ್ಷರಾಗಿ ಸೋಮಶೇಖರ್ ಜೆ.ಎಸ್. ಹಾಗೂ ಉಪಾಧ್ಯಕ್ಷರಾಗಿ ಡಾ. ಫಾತಿಮತ್ ಜಹನಾಸ್ ಹಂಸಾರ್ ಆಯ್ಕೆ ಆಯ್ಕೆಯಾಗಿದ್ದಾರೆ.
ಒಟ್ಟು 17 ವಾರ್ಡ್ ಗಳಿರುವ ಎಣ್ಮಕಜೆ ಪಂಚಾಯಿತಿಯಲ್ಲಿ 8 ವಾರ್ಡ್ ಗಳಲ್ಲಿ ಜಯಗಳಿಸಿ ಬಹುಮತ ಪಡೆದ ಯುಡಿಎಫ್ ಮತ್ತೆ ಅಧಿಕಾರಕ್ಕೇರಿದೆ.ಬಿಜೆಪಿ 5, ಎಲ್ ಡಿಎಫ್ 4 ವಾರ್ಡ್ ಗಳಲ್ಲಿ ಜಯಗಳಿಸಿದೆ.14ನೇ ವಾರ್ಡ್ ಶೇಣಿಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಜಯಗಳಿಸಿದ್ದರು.
2010ರಲ್ಲಿ ಶೇಣಿ ವಾರ್ಡಿನಿಂದ ಸ್ಪರ್ಧಿಸಿ ಗ್ರಾ.ಪಂ.ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸೋಮಶೇಖರ್ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಪ್ರಗತಿ ಕಾರ್ಯಗಳನ್ನು ನಡೆಸಿ ಜನ ಪ್ರೀತಿ ಗಳಿಸಿದ್ದರು.ಪಕ್ಷಾತೀತ ಹಾಗೂ ಪಾರದರ್ಶಕ ಆಡಳಿತದೊಂದಿಗೆ ಶಿಕ್ಷಣ,ಕುಡಿನೀರು,ಗ್ರಾಮೀಣ ರಸ್ತೆ, ಕೃಷಿ,ಆರೋಗ್ಯ, ವಸತಿ ಯೋಜನೆ, ಸಾಮಾಜಿಕ ಕ್ಷೇಮಾಭಿವೃದ್ಧಿ ಸಹಿತ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪಂಚಾಯಿತಿಯನ್ನು ಅಭಿವೃದ್ಧಿಯ ಪಥದೆಡೆಗೆ ಮುನ್ನಡೆಸಿದ್ದರು.ಪೆರ್ಲ ಪೇಟೆ ಸಹಿತ ಪಂಚಾಯಿತಿಯ ನಾನಾ ಕಡೆ ದಾರಿದೀಪ, ಹೈಮಾಸ್ಟ್ ದೀಪ ಸ್ಥಾಪನೆ, ಆರೋಗ್ಯ ಕೇಂದ್ರ ಕಾರ್ಯಚರಣೆ, ಅಂಗನವಾಡಿಗಳ ಮೂಲಭೂತ ಅಭಿವೃದ್ದಿ, ಗ್ರಾಮೀಣ ರಸ್ತೆ ಅಭಿವೃದ್ಧಿ ಹೀಗೆ ಹತ್ತು ಹಲವಾರು ಕೆಲಸಗಳನ್ನು ಕಾರ್ಯಗತಗೊಳಿಸಿ ಪೆರ್ಲ ಪೇಟೆಯ ಸರ್ವತೋಮುಖ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದರು. ಬಡ್ಸ್ ಶಾಲೆ ಶಾಲೆ, ಎಂಡೋ ಸಂತ್ರಸ್ತರಿಗೆ ವಸತಿ, ಆರೋಗ್ಯ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.ಕೃಷಿ ಸೌಲಭ್ಯಗಳನ್ನು ಆಯಾ ಸಮಯ, ಸಂದರ್ಭಗಳಿಗೆ ವ್ಯಾಪಾರಿಗಳು, ವಾಹನ ಚಾಲಕರು, ಕಾನೂನು ಪಾಲಕರು, ಜನ ಸಾಮಾನ್ಯರನ್ನು ಒಗ್ಗೂಡಿಸಿ ಎಣ್ಮಕಜೆ ಪಂಚಾಯಿತಿಯನ್ನು ಪ್ರಗತಿಯೆಡೆಗೆ ಸಾಗಿಸಿದ್ದರು.ಸೋಮಶೇಖರ್ ಅವರ ತಾಯಿ ಶಾರದಾ ವೈ ಕಳೆದ ಪಂಚಾಯಿತಿ ಆಡಳಿತ ಸಮಿತಿ ಅಧ್ಯಕ್ಷರಾಗಿದ್ದರು.
ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ.ಫಾತಿಮತ್ ಜಹನಾಸ್ ಹಂಸಾರ್ ಇದೇ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ವೈದ್ಯ ವೃತ್ತಿ ನಡೆಸುತ್ತಿದ್ದಾರೆ.
ಅಧ್ಯಕ್ಷರಿಗೆ ಚುನಾವಣಾ ಅಧಿಕಾರಿ ರಾಜೀವನ್ ಹಾಗೂ ಉಪಾಧ್ಯಕ್ಷರಿಗೆ ಅಧ್ಯಕ್ಷರು ಪ್ರತಿಜ್ಞಾ ವಿಧಿ ಬೋಧಿಸಿದರು.