ನವದೆಹಲಿ: ಕೃಷಿ ಕಾನೂನುಗಳ ಬಗ್ಗೆ ಸುಳ್ಳು ಸುದ್ದಿಗಳು ಮತ್ತು ವದಂತಿಗಳನ್ನು ಹರಡುತ್ತಿರುವುದಕ್ಕಾಗಿ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ನೂತನ ಕೃಷಿ ಕಾನೂನುಗಳ ಬಗ್ಗೆ ರೈತರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಿರುವುದಾಗಿ ಶುಕ್ರವಾರ ಪುನರುಚ್ಚರಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೃಷಿಯಲ್ಲಿ 'ಬ್ರಾಂಡ್ ಇಂಡಿಯಾ' ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದ ಪ್ರಧಾನಿ, ಖಾಸಗಿ ಹೂಡಿಕೆಯಿಂದ ರೈತರ ಆದಾಯ ಹೆಚ್ಚಳ ಸೇರಿದಂತೆ ಕೃಷಿ ಕಾನೂನುಗಳಿಂದಾಗುವ ಪ್ರಯೋಜನಗಳ ಬಗ್ಗೆ ಸುಧೀರ್ಘವಾಗಿ ಮಾತನಾಡಿದ್ದಾರೆ.
ಬಿಜೆಪಿ ಆಯೋಜಿಸಿದ್ದ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಮಾತನಾಡಿದ ಪ್ರಧಾನಿ, ರಾಜಕೀಯ ಪ್ರೇರಿತ ಜನರು ಹೇಳಿದ್ದನ್ನು ನಾನು ಹೇಳುವುದಕ್ಕೆ ಆಗಲ್ಲ, ನಮ್ಮನ್ನು ಟೀಕಿಸುವ ರಾಜಕೀಯ ವಿಮರ್ಶಕೊಂದಿಗೆ ಕೃಷಿ ಕಾನೂನುಗಳ ಸಂಗತಿಗಳು ಮತ್ತು ವಸ್ತುನಿಷ್ಠತೆ ಕುರಿತು ಮಾತನಾಡಲು ಸರ್ಕಾರ ಸಿದ್ಧವಿರುವುದನ್ನು ಭರವಸೆ ನೀಡಲು ಬಯಸುತ್ತೇನೆ ಎಂದರು.
ರೈತರ ಪ್ರತಿಭಟನೆಯನ್ನು ಕೆಲವು ರಾಜಕೀಯ ಹಿತಾಸಕ್ತಿಯ ಜನರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಸಾಗಿದೆ. ಇವೆಂಟ್ ಮ್ಯಾನೇಜ್ ಮೆಂಟ್ ರೀತಿಯ ಕೆಲಸಗಳು ನಡೆಯುತ್ತಿವೆ. ಜನರು ಸೆಲ್ಫಿ ತೆಗೆದುಕೊಂಡು ಟಿವಿಗಳಲ್ಲಿ ಬರುತ್ತಾರೆ. ದೆಹಲಿ ಜನರಿಗೆ ಕಿರುಕುಳ ಮತ್ತು ಆರ್ಥಿಕತೆಗೆ ನೋವುಂಟು ಮಾಡುವ ಪ್ರಯತ್ನಗಳಾಗುತ್ತಿವೆ. ತಮ್ಮನ್ನು ಬಿಂಬಿಸಿಕೊಳ್ಳಲು ದೊಡ್ಡ ದೊಡ್ಡವರು ಪ್ರತಿಭಟನಾ ಸ್ಥಳದಲ್ಲಿ ಭಾಷಣ ಮಾಡುತ್ತಿದ್ದಾರೆ. ಆದರೆ, ಇದೇ ರೀತಿಯ ರಾಜಕೀಯ ಸಿದ್ದಾಂತವುಳ್ಳ ಕೆಲವು ಜನರು ಎಪಿಎಂಸಿ ಇಲ್ಲದಿರುವ ಕೇರಳ ಮತ್ತು ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯಿಂದ 70 ಲಕ್ಷ ರೈತರನ್ನು ವಂಚಿತರನ್ನಾಗಿ ಮಾಡಿರುವ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಮಾಡುತ್ತಿಲ್ಲ ಎಂದು ಹೇಳಿದರು.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮುಂದುವರೆಸಿದ ಪ್ರಧಾನಿ, ಆರಂಭದಲ್ಲಿ ರೈತರ ಪ್ರತಿಭಟನೆ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಕಾಳಜಿಯತ್ತ ಇತ್ತು. ಆದರೆ, ತದ ನಂತರ ಹಿಂಸಾಚಾರ ಆರೋಪದಲ್ಲಿ ಜೈಲಿನಲ್ಲಿರುವವರ ಬಿಡುಗಡೆ ಬೇಡಿಕೆ ಸೇರಿದಂತೆ ರಾಜಕೀಯ ಸಮಸ್ಯೆಗಳತ್ತ ಹೊರಳಿತು. ಇಂತಹ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ರೈತರು ಹಲವು ದಶಕಗಳಿಂದ ನೋವು ಅನುಭವಿಸಿದ್ದಾರೆ ಎಂದು ಟೀಕಿಸಿದರು.