ನವದೆಹಲಿ: ಭಾರತಕ್ಕೆ ಮಾತ್ರವಲ್ಲದೆ ನೆರೆ ರಾಷ್ಟ್ರಗಳಿಗೂ ಹವಾಮಾನ ಮಾಹಿತಿಯನ್ನು ನೀಡುವ ಉದ್ದೇಶದಿಂದ ಹಿಮಾಲಯ ಪರ್ವತ ಪ್ರದೇಶಕ್ಕಾಗಿ ಪ್ರತ್ಯೇಕ ಪ್ರಾದೇಶಿಕ ಹವಾಮಾನ ಕೇಂದ್ರ ನಿರ್ಮಿಸುವ ಯೋಜನೆಯನ್ನು ಭಾರತ ಹೊಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ನಿರ್ದೇಶಕ ಮೃತ್ಯುಂಜಯ ಮೊಹಪಾತ್ರ ಸೋಮವಾರ ಹೇಳಿದರು.
ಇಂಥ ಕೇಂದ್ರವನ್ನು ಸ್ಥಾಪಿಸುವ ಕಾರ್ಯ ಈಗಾಗಲೇ ಆರಂಭವಾಗಿದ್ದು, ವಿಶ್ವ ಹವಾಮಾನ ಸಂಸ್ಥೆ(ಡಬ್ಲ್ಯುಎಂಒ) ಜೊತೆ ಮಾತುಕತೆ ನಡೆಯುತ್ತಿದೆ ಎಂದು ಮೊಹಪಾತ್ರ ತಿಳಿಸಿದರು. ಚೀನಾ ಕೂಡಾ ಅವರ ಭಾಗದ ಹಿಮಾಲಯದಲ್ಲಿ ಇಂಥ ಪ್ರಾದೇಶಿಕ ಹವಾಮಾನ ಕೇಂದ್ರವನ್ನು ನಿರ್ಮಿಸುತ್ತಿದೆ ಎಂದೂ ತಿಳಿಸಿದರು.
'ಪಶ್ಚಿಮ ಹಾಗೂ ಪೂರ್ವ ಘಟ್ಟದಂಥ ಪರ್ವತ ಪ್ರದೇಶದಲ್ಲಿ ಮುಂಗಾರು ಸಂದರ್ಭದಲ್ಲಿ ಹಲವು ದುರ್ಘಟನೆಗಳು ಸಂಭವಿಸಿರುವುದನ್ನು ನಾವು ನೋಡಿದ್ದೇವೆ. ಹಿಮಾಲಯ ಪರ್ವತ ಅಥವಾ ಈಶಾನ್ಯ ರಾಜ್ಯಗಳಲ್ಲಿ ಕಂಡುಬರುತ್ತಿದ್ದ ಭೂಕುಸಿತದಂಥ ಘಟನೆಗಳು ಕರ್ನಾಟಕ ಮತ್ತು ಕೇರಳದಲ್ಲಿ ನಡೆದಿದೆ. ಹಿಮಾಲಯ ಪ್ರದೇಶದಲ್ಲಿ ನಡೆಯುವ ಭೂಕಂಪ ಅಥವಾ ಮೇಘಸ್ಫೋಟವು ಸ್ಥಳೀಯ ಕೃಷಿ, ಕೈಗಾರಿಕೆಗಳು ಹಾಗೂ ಜನಜೀವನಕ್ಕೂ ಹಾನಿಯುಂಟು ಮಾಡಿವೆ. ಹೀಗಾಗಿ ಈ ಕೇಂದ್ರವು ಭಾರತಕ್ಕೆ ಮಾತ್ರವಲ್ಲದೆ ಹಿಮಾಲಯ ಪರ್ವತ ಪ್ರದೇಶವಿರುವ ನೆರೆ ರಾಷ್ಟ್ರಗಳಿಗೂ ಹವಾಮಾನ ಮುನ್ಸೂಚನೆ ನೀಡಲಿವೆ' ಎಂದು ಹೇಳಿದರು.
2016ರಲ್ಲಿ ಸ್ಥಾಪಿಸಲ್ಪಟ್ಟ 'ಹಿಮಾಂಶ್' ಸಂಶೋಧನಾ ಕೇಂದ್ರವೂ ಕೂಡಾ ಹಿಮಾಲಯದಲ್ಲಿ ಹವಾಮಾನಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸಲಿವೆ ಎಂದು ಮಾಹಿತಿ ನೀಡಿದರು.