ಕೋವಿಡ್ ಬದುಕಿನಲ್ಲಿ ತರುತ್ತಿರುವ ಬದಲಾವಣೆ ಅಷ್ಟಿಷ್ಟಲ್ಲ. ಯಾವ ಮಟ್ಟಕ್ಕೆಂದರೆ, ಈಗ ಮದುವೆಯ ವೈಖರಿಯೂ ಬದಲಾಗುತ್ತಿದೆ. ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ವಧುವಿಗೆ ಕೊರೊನಾ ಪಾಸಿಟಿವ್ ಇದೆ ಎಂದು ಪತ್ತೆಯಾದಾಗ, ಪಿಪಿಇ ಕಿಟ್ ಧರಿಸಿಯೇ ವಧು-ವರ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮದುವೆಯಾಗಿದ್ದರು.
ಮದುವೆ ನಡೆಸಿದ ಪಂಡಿತರೂ ಪಿಪಿಇ ಕಿಟ್‌ನಲ್ಲಿಯೇ ಇದ್ದರು. ಈಗ ತಮಿಳುನಾಡಿನ ಜೋಡಿಯೊಂದು ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ವರ್ಚುವಲ್ ಆಗಿಯೇ ಮದುವೆ ವೀಕ್ಷಿಸಲು ಆಹ್ವಾನ ಕಳಿಸಿದ್ದಷ್ಟೇ ಅಲ್ಲದೇ, ಅವರ ಮನೆಗಳಿಗೆಲ್ಲ ಮದುವೆ ಊಟವನ್ನೂ ಕಳಿಸಿಕೊಟ್ಟಿದ್ದಾರೆ!
ಸಂಬಂಧಿಕರು, ಸ್ನೇಹಿತರ ಮನೆಗೆ 18 ವಿಧದ ಖಾದ್ಯಗಳ ನ್ನೊಳಗೊಂಡ ಮದುವೆಯ ಊಟವನ್ನು (ನಾಲ್ಕು ಡಬ್ಬಿಗಳಲ್ಲಿ), ಜತೆಗೆ ಬಾಳೆ ಎಲೆಯನ್ನೂ ಕಳುಹಿಸಿಕೊಡಲಾಗಿದೆ. ಈ ಶುಭಮಂಗಳ ಕಾರ್ಯವನ್ನು ಆನ್‌ಲೈನ್‌ನಲ್ಲೇ ವೀಕ್ಷಿಸಿದ ಶುಭಚಿಂತಕರು, ಜತೆಯಲ್ಲಿಯೇ ರುಚಿರುಚಿಯಾದ ವಿವಾಹ ಭೋಜನವನ್ನೂ ಸವೆದಿದ್ದಾರೆ. ಈ ವಿಚಾರವನ್ನೂ ಅನೇಕರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಈ ವಿನೂತನ ಮದುವೆಯನ್ನು ಅನೇಕರು ಕೊಂಡಾಡುತ್ತಿದ್ದರೆ, ಇನ್ನೂ ಕೆಲವರು ಪರಿಸ್ಥಿತಿ ಎಲ್ಲಿಗೆ ಬಂತಪ್ಪ ಎಂದು ಲೊಚಗುಟ್ಟುತ್ತಿದ್ದಾರೆ.