ತಿರುವನಂತಪುರ: ವಿಧಾನಸಭೆ ಅಧಿವೇಶನ ನಡೆಸಲು ಅನುಮತಿ ನಿರಾಕರಿಸಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಕ್ರಮ ಕುರಿತು ವಿವಾದದ ನಡುವೆ ರಾಜ್ಯಪಾಲರು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಕೋಝಿಕ್ಕೋಡ್‍ನಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುತ್ತಿರುವ ಮೋಹನ್ ಭಾಗವತ್ ಅವರು ಡಿ.31 ರಂದು ರಾಜ್ಯಪಾಲರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆರ್‍ಎಸ್‍ಎಸ್‍ನ ಪ್ರಕಟಣೆಯಾದ ಕೇಸರಿ ನೇತೃತ್ವದಲ್ಲಿ ಕೋಝಿಕ್ಕೋಡ್ ನಲ್ಲಿ ಪ್ರಾರಂಭವಾಗಲಿರುವ ಮಾಧ್ಯಮ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಉದ್ಘಾಟನೆಗಾಗಿ ಆರ್‍ಎಸ್‍ಎಸ್ ಮುಖ್ಯಸ್ಥರು ಕೇರಳಕ್ಕೆ ಆಗಮಿಸುತ್ತಿದ್ದಾರೆ. ಡಿ.30 ರಂದು ತಿರುವನಂತಪುರದಲ್ಲಿ ನಡೆಯಲಿರುವ ಆರ್‍ಎಸ್‍ಎಸ್ ರಾಜ್ಯ ನಾಯಕರ ಸಭೆಯಲ್ಲಿಯೂ ಅವರು ಭಾಗವಹಿಸಲಿದ್ದಾರೆ. ಇದರ ಬಳಿಕ ರಾಜ್ಯಪಾಲರೊಂದಿಗೆ ಸಭೆ ನಡೆಯಲಿದೆ. ಮೋಹನ್ ಭಾಗವತ್ ಡಿ.31 ರ ರಾತ್ರಿ ನಾಗ್ಪುರಕ್ಕೆ ಮರಳಲಿದ್ದಾರೆ.
ರಾಜ್ಯಪಾಲರು ಮತ್ತು ಆರ್‍ಎಸ್‍ಎಸ್ ಮುಖ್ಯಸ್ಥರ ನಡುವೆ ಯಾವ ವಿಷಯದ ಬಗ್ಗೆ ಸಭೆ ನಡೆಯಲಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಆರ್‍ಎಸ್‍ಎಸ್ ಅಧಿಕೃತ ವಿವರಣೆಯನ್ನು ನೀಡಿಲ್ಲ.
ಏತನ್ಮಧ್ಯೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮತ್ತೆ ವಿಧಾನ ಸಭಾ ಅಧಿವೇಶನ ನಡೆಸಲು ರಾಜ್ಯಪಾಲರು ಅನುಮತಿ ನಿರಾಕರಿಸಿದ್ದಕ್ಕಾಗಿ ಟೀಕಿಸಿರುವರು. ಕ್ಯಾಬಿನೆಟ್ ನಿರ್ಧಾರವನ್ನು ಅನುಮೋದಿಸಿದರೆ, ರಾಜ್ಯಪಾಲರು ಅದನ್ನು ಅನುಮೋದಿಸಬೇಕು ಎಂದರ್ಥ. ರಾಜ್ಯಪಾಲರ ಕ್ರಮ ಸಂಸದೀಯ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಸಿಎಂ ಹೇಳಿರುವರು. ಕೇಂದ್ರದ ಕೃಷಿ ಕಾನೂನಿನ ವಿರುದ್ಧ ವಿಶೇಷ ಸಭೆ ಕರೆಯಲು ರಾಜ್ಯಪಾಲರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ವಿವಾದ ತೀವ್ರಗೊಂಡಿದೆ. ರಾಜ್ಯಪಾಲರ ಕ್ರಮಕ್ಕೆ ವಿರುದ್ಧವಾಗಿ ಆಡಳಿತ-ಪಕ್ಷದಿಂದ ತೀವ್ರ ವಿರೋಧವು ನೇರವಾಗಿ ವ್ಯಕ್ತಗೊಂಡಿದೆ.