ಕಾಸರಗೋಡು: ನಗರದ ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ವತಿಯಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಎರಡು ತಿಂಗಳ ಯಕ್ಷಗಾನ ಬೊಂಬೆಯಾಟ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಪಿಲಿಕುಂಜೆಯ ಯಕ್ಷಪುತ್ಥಳಿ ಬೊಂಬೆ ಮನೆಯಲ್ಲಿ ಜರಗಿತು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ದಾಮೋದರ ಶೆಟ್ಟಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ, ಹಿರಿಯ ಪತ್ರಕರ್ತ ಹಾಗು ಕಲಾವಿದರಾದ ನಾ.ಕಾರಂತ ಪೆರಾಜೆ ಅವರು ಶುಭಹಾರೈಸಿದರು. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಕೆ.ವಿ.ರಮೇಶ್ ಉಪಸ್ಥಿತರಿದ್ದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಿಬಿರಾರ್ಥಿ ಭವ್ಯಶ್ರೀ ಬಲ್ಲಾಳ್ ಸ್ವಾಗತಿಸಿದರು. ಸುನೀತಾ ಪ್ರಾರ್ಥನೆ ಹಾಡಿದರು. ಸಂಘಟಕ, ಸಾಮಾಜಿಕ ಕಾರ್ಯಕರ್ತ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಕೆ.ವಿ.ಸರಳಿ ವಂದಿಸಿದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಂದ ನರಕಾಸುರ ವಧೆ ಯಕ್ಷಗಾನ ಬೊಂಬೆಯಾಟ ಪ್ರದರ್ಶನ ನಡೆಯಿತು.