ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಹೆಚ್ಚಿನವರು ರೈತರಂತೆ ಕಾಣಿಸುತ್ತಿಲ್ಲ ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಚಿತ್ರಗಳಲ್ಲಿ ಕಾಣುವವರ ಪೈಕಿ ಅನೇಕರು ರೈತರಂತೆ ಕಾಣುತ್ತಿಲ್ಲ. ರೈತರ ಹಿತದೃಷ್ಟಿಯಿಂದ ಏನು ಮಾಡಲಾಗಿದೆ? ಇದು ಕೃಷಿ ಕಾನೂನಿನೊಂದಿಗೆ ಆಕ್ಷೇಪ ಹೊಂದಿರುವ ರೈತರಲ್ಲ, ಬೇರೆಯವರು. ವಿರೋಧಕ್ಕಿಂತಲೂ ಕಮಿಷನ್ ಪಡೆಯುವವರು ಇದರ ಹಿಂದಿದ್ದಾರೆ ಎಂದು ಸಿಂಗ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಂಗಳವಾರ 35 ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನಡುವೆ ಮಾತುಕತೆ ನಡೆದಿದ್ದು, ತೀರ್ಮಾನಕ್ಕೆ ಬರಲಾಗಿಲ್ಲ. ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ. ಮಾತುಕತೆ ನಿಟ್ಟಿನಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳ ಸಣ್ಣ ಸಮಿತಿ ರಚಿಸಿ ಎಂದು ಸಚಿವರು ನೀಡಿದ ಸಲಹೆಯನ್ನು ರೈತ ಸಂಘಟನೆಗಳೂ ತಿರಸ್ಕರಿಸಿವೆ.
'ಮೂರೂ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸುತ್ತೇವೆ. ಅದೊಂದೇ ನಮ್ಮ ಬೇಡಿಕೆ' ಎಂದು 'ಭಾರತೀಯ ಕಿಸಾನ್ ಯೂನಿಯನ್'ನ ಅಧ್ಯಕ್ಷ ಬಲ್‌ಬೀರ್ ಸಿಂಗ್ ರಾಜೆವಾಲ್ ಹೇಳಿದ್ದಾರೆ.