ನವದೆಹಲಿ: ಕೃಷಿ ಕಾಯ್ದೆ ಬಗ್ಗೆ ಬಿಜೆಪಿ-ಕಾಂಗ್ರೆಸ್ ನಡುವಿನ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿದ್ದು, ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದ ರಾಹುಲ್ ಗಾಂಧಿ ಅವರ ಹಳೆಯ ಭಾಷಣಗಳನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಪ್ರಕಟಿಸಿದ್ದಾರೆ.
ಲೋಕಸಭೆಯಲ್ಲಿ ಕೃಷಿ ಮಸೂದೆ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಈ ಕೃಷಿ ಕಾಯ್ದೆಗಳಿಂದಾಗಿ ರೈತರಿಗೆ ಮಧ್ಯವರ್ತಿಗಳಿಂದ ಮುಕ್ತಿ ದೊರೆಯಲಿದ್ದು, ತಮ್ಮ ಉತ್ಪನ್ನಗಳನ್ನು ಉದ್ಯಮಿಗಳಿಗೆ ನೇರವಾಗಿ ಮಾರಾಟ ಮಾಡಬಹುದು ಎಂದು ಹೇಳಿರುವುದು ಕಂಡುಬಂದಿದೆ.
ಈಗ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿರುವ ರೈತರನ್ನು ಬೆಂಬಲಿಸುತ್ತಿರುವ ರಾಹುಲ್ ಗಾಂಧಿ ವಿರುದ್ಧ ಇದೇ ವಿಷಯವನ್ನಿಟ್ಟುಕೊಂಡು ಆರೋಪ ಮಾಡಿರುವ ಜೆಪಿ ನಡ್ಡಾ, ಈ ಹಿಂದೆ ನೀವೇ ಬೆಂಬಲಿಸಿದ್ದನ್ನು ಈಗ ವಿರೋಧಿಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.
"ರೈತರ ಪ್ರತಿಭಟನೆಯ ವಿಷಯದಲ್ಲಿ ಕಾಂಗ್ರೆಸ್ ನಾಯಕರು ರಾಜಕಾರಾಣ ಮಾಡುತ್ತಿದ್ದಾರೆ ಎಂದು ನಡ್ಡಾ ಆರೋಪಿಸಿದ್ದಾರೆ. ರಾಹುಲ್ ಜೀ ಇದೇನು ಮ್ಯಾಜಿಕ್ ನಡೆಯುತ್ತಿದೆ, ಈ ಹಿಂದೆ ನೀವೇ ಒಪ್ಪಿದ್ದನ್ನು ಈಗ ನೀವೇ ವಿರೋಧಿಸುತ್ತಿದ್ದೀರಿ, ನಿಮಗೆ ದೇಶದ, ರೈತರ ಹಿತಾಸಕ್ತಿಗೆ ಸಂಬಂಧಿಸಿದಂತೆ ಏನೂ ಆಗಬೇಕಿಲ್ಲ, ನಿಮಗೆ ಕೇವಲ ರಾಜಕಾರಣವಷ್ಟೇ ಮಾಡಬೇಕಿದೆ. ದೇಶದ ಜನತೆಗೆ, ರೈತರಿಗೆ ನಿಮ್ಮ ದ್ವಿಮುಖ ನೀತಿ ಅರ್ಥವಾಗಿದೆ ಎಂದು ನಡ್ಡಾ ವಾಗ್ದಾಳಿ ನಡೆಸಿದ್ದಾರೆ.