ನವದೆಹಲಿ,: ಪಾಕಿಸ್ತಾನವು ಭಾರತದೊಳಗೆ ನುಸುಳಲು ಕೊರೆದಿದ್ದ ರಹಸ್ಯ ಸುರಂಗದಲ್ಲಿ ಭಾರತೀಯ ಯೋಧರು 200ಮೀಟರ್‌ನಷ್ಟು ದೂರ ಕ್ರಮಿಸಿದ್ದಾರೆ.
ಭಯೋತ್ಪಾದಕರು ಬಳಸುತ್ತಿದ್ದ ಸುರಂಗದ ರಹಸ್ಯವನ್ನು ತಿಳಿಯಲು, ಭಾರತೀಯ ಸೈನಿಕರು ಇತ್ತೀಚೆಗೆ ಪಾಕಿಸ್ತಾನದ ನೆಲದಲ್ಲಿ ಸುಮಾರು 200 ಮೀಟರ್ ಒಳಗೆ ಹೋಗಿದ್ದಾರೆ ಎಂಬುದು ತಿಳಿದುಬಂದಿದೆ.
ಬಾಲಾಕೋಟ್ ವಾಯುದಾಳಿ ಹಾಗೂ ಪಿಒಕೆ ಮೇಲಿನ ಸರ್ಜಿಕಲ್ ದಾಳಿಯ ಬಳಿಕ, ಭಾರತೀಯ ಸೇನೆಯ ತಾಕತ್ತು ಏನು ಎಂಬುದು ಪಾಕಿಸ್ತಾನಕ್ಕೆ ತಿಳಿದಂತಿದೆ.
ಭಾರತೀಯ ಸೈನಿಕ ಕಾರ್ಯಾಚರಣೆಗಳು ಪಾಕಿಸ್ತಾನದ ನಿದ್ದೆಗಡೆಸಿರುವುದಂತೂ ಸುಳ್ಳಲ್ಲ.ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್ ಬಳಿಯ ಗಡಿ ಪ್ರದೇಶದಲ್ಲಿ ಭಯೋತ್ಪಾದಕರು ನಿರ್ಮಿಸಿದ್ದ ಸುರಂಗದೊಳಗೆ ಕಳೆದ ನ.22ರಂದು ಭಾರತೀಯ ಸೈನಿಕರು ಪ್ರವೇಸಿದ್ದಾರೆ.
ಈ ಸುರಂಗದ ಮತ್ತೊಂದು ತುದಿ ಪಾಕ್ ನೆಲದಲ್ಲಿ ತೆರೆದುಕೊಳ್ಳುತ್ತದೆ. ಕೇವಲ ಸುರಂಗ ಮಾರ್ಗದೊಳಗೆ ನುಗ್ಗಿರುವುದಲ್ಲದೇ, ಭಯೋತ್ಪಾದಕರು ಬಳಸುತ್ತಿದ್ದ ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನು ಭಾರತೀಯ ಸೈನಿಕರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸುರಂಗದ ಮತ್ತೊಂದು ತುದಿಯವರೆಗೂ ತಲುಪಿರುವ ಭಾರತೀಯ ಸೈನಿಕರು, ಈ ಸುರಂಗದ ಮಾಹಿತಿಯನ್ನು ಪಡೆದು ಸುರಕ್ಷಿತವಾಗಿ ಮರಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, ಭಾರತೀಯ ಸೇನೆಯ ಈ ಕಾರ್ಯಾಚರಣೆ ಕುರಿತು ಪಾಕಿಸ್ತಾನಕ್ಕೆ ಇದುವರೆಗೂ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.