ಮುಳ್ಳೇರಿಯ: ಕಾರಡ್ಕ ಬ್ಲಾಕ್ ವ್ಯಾಪ್ತಿಯ ಸಂಗ್ರಹ ಕೇಂದ್ರವಾದ ಬೋವಿಕ್ಕಾನ ಜಿಎಚ್‍ಎಚ್‍ಎಸ್ ಶಾಲೆಯಲ್ಲಿ ಸೌಭಾಗ್ಯ ಕುಟುಂಬಶ್ರೀ ಸದಸ್ಯರು ಆಹಾರವನ್ನು ತಯಾರಿಸಿ ಮತದಾನ ಪ್ರಕ್ರಿಯೆಯ ಸಿಬ್ಬಂದಿಗಳ ಹಸಿವು ತಣಿಸಲು ನೆರವಾದರು.
ಮುಳಿಯಾರ್ ಪಂಚಾಯತಿಯ ಕುಟುಂಬಶ್ರೀ ಜನಪರ ಹೋಟೆಲ್ ಗಳ ಒಂಬತ್ತು ಮಂದಿ ಕಾರ್ಯಕರ್ತೆಯರು ಚುನಾವಣಾ ಅಧಿಕಾರಿಗಳಿಗೆ ಮತ್ತು ಇತರರಿಗೆ ಆಹಾರವನ್ನು ತಯಾರಿಸಿ ವಿತರಿಸಿದರು. ಈ ಹಿನ್ನೆಲೆಯಲ್ಲಿ ಕುಟುಂಬಶ್ರೀ ಸದಸ್ಯೆಯರು ಕಳೆದ ಎರಡು ದಿನಗಳಿಂದ ಶಾಲಾ ಆವರಣದಲ್ಲಿ ತಯಾರಿ ನಡೆಸಿದ್ದರು. ಭಾನುವಾರ ಒಂದೇ ದಿನ 35,250 ರೂ.ಗಳ ವ್ಯವಹಾರ ನಡೆದಿದೆ. ಬೆಳಗಿನ ಉಪಾಹಾರ, ಚಹಾ ಮತ್ತು ತಿಂಡಿಗಳು, ಮಧ್ಯಾಹ್ನದ ಊಟ, ಸಂಜೆ ಚಹಾ ಮತ್ತು ರಾತ್ರಿಯ ಊಟಗಳನ್ನು ಸಿದ್ದಪಡಿಸಿ ನೀಡಲಾಗಿದೆ. ಟೋಕನ್ ನೀಡಿದ 200 ಜನರಿಗೆ ಮತಗಟ್ಟೆಗಳಿರುವ ಶಾಲೆಗಳಿಗೆ ತಯಾರಿಸಿ ನೀಡಲಾಗಿದೆ. ಕೆಲವೆಡೆಗಳಿಗೆ ದುರ್ಗಮ ಹಾದಿಗಳಾದ ಗುಡ್ಡಗಳನ್ನು ಕಾಲ್ನಡಿಯಲ್ಲೇ ಏರಿಳಿದು ತಲಪಿಸಿದ್ದಾರೆ. ಕುಟುಂಬಶ್ರೀ ಸದಸ್ಯರು ಚುನಾವಣಾ ಘೋಷಣೆಯಾದಾಗಿನಿಂದ ಮತದಾನ ಪ್ರಕ್ರಿಯೆಯ ಸಿಬ್ಬಂದಿಗಳ ಆಹಾರ ಪೂರೈಕೆಯ ನಿಟ್ಟಿನಲ್ಲಿ ತಯಾರಿ ನಡೆಸಿದ್ದರು. ಡಿ.16 ರಂದು ನಡೆಯಲಿರುವ ಮತ ಎಣಿಕೆ ದಿನದಂದು ಚುನಾವಣಾ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಚಹಾ ಮತ್ತು ತಿಂಡಿಗಳು ಮತ್ತು ಮಧ್ಯಾಹ್ನದ ಊಟವನ್ನೂ ನೀಡಲು ಈಗಾಗಲೇ ಯೋಜನೆ ರೂಪಿಸಿದ್ದಾರೆ.