ಕಾಸರಗೋಡು: ಹೆರಿಗೆ ಶಸ್ತ್ರಚಿಕಿತ್ಸೆಯಲ್ಲಿ ಮಹಿಳೆಯೊಬ್ಬಳು ಯಕೃತ್ತಿನ ಗಾಯ ಕೀವುತುಂಬಿ ಉಲ್ಬಣಗೊಂಡು ಜೀವನ್ಮರಣ ಹೋರಾಟಮಾಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ವೈದ್ಯರ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಞಂಗಾಡ್ ಸನ್ ರ್ಯೆಸ್ ಆಸ್ಪತ್ರೆಯ ಸ್ತ್ರೀರೋಗತಜ್ಞ ಡಾ. ರಾಘವೇಂದ್ರ ರಾವ್, ಶಸ್ತ್ರಚಿಕಿತ್ಸಕ ಡಾ. ಗಿರಿಧರ ರಾವ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಜನೂರು ಪಳ್ಳಂನ ಶಬ್ನಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿರುವರು.
ಗಾಯ ಹೊಲಿದಿರಲಿಲ್ಲ!:
ಪ್ರಸೂತಿ ಚಿಕಿತ್ಸೆಗಾಗಿ ಸನ್‌ರೈಸ್ ಆಸ್ಪತ್ರೆಗೆ ದಾಖಲಾದ ಶಬ್ನಾ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆಪರೇಷನ್ ಸಮಯದಲ್ಲಿ ಅವರಿಗೆ ಪಿತ್ತಜನಕಾಂಗಕ್ಕೆ ತೀರ್ವ ಗಾಯವಾಗಿತ್ತು. ಆದರೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಅದನ್ನು ಗಮನಿಸಿರಲಿಲ್ಲ. ನಂತರ ಶಬ್ನಾ ಅವರನ್ನು ಚಿಕಿತ್ಸೆಗಾಗಿ ಕಣ್ಣೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷೆಯಲ್ಲಿ ಪಿತ್ತಜನಕಾಂಗದ ಗಾಯ ಕಂಡುಬಂದಿದೆ. ಗಾಯವನ್ನು ಹೊಲಿಯದಿರುವುದು ಮತ್ತು ಕೀವು ತುಂಬಿರುವುದು ಕಂಡುಬಂತು.
ಆಸ್ಪತ್ರೆಯ ವಿರುದ್ಧ ದೂರು:
ಕಣ್ಣೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಶಬ್ನಾ ಅವರು ಸನ್‌ರೈಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಸೂಚನೆಯಂತೆ ಡಾ. ವಿನೋದ್ ಕುಮಾರ್ ಸೇರಿದಂತೆ ಮೂವರು ಸದಸ್ಯರ ವೈದ್ಯಕೀಯ ಸಮಿತಿಯ ತಜ್ಞರ ಪರೀಕ್ಷೆಯಲ್ಲಿ ಶಬ್ನಾರಿಗೆ ಪಿತ್ತಜನಕಾಂಗಕ್ಕೆ ಗಾಯಗೊಂಡಿರುವುದು ದೃಢ ಪಟ್ಟಿದೆ. ವರದಿಯನ್ನು ಡಿಎಂಒಗೆ ಹಸ್ತಾಂತರಿಸಲಾಯಿತು. ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.