ನವದೆಹಲಿ: ವಿಜ್ಞಾನಿಗಳು ಅನುಮತಿ ನೀಡಿದ ಕೂಡಲೇ ಕೋವಿಡ್ -19 ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಕೊರೋನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಮತ್ತು ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ವೃದ್ಧರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಸಾಂಕ್ರಾಮಿಕ ಪರಿಸ್ಥಿತಿ ಕುರಿತು ಚರ್ಚಿಸಲು ಕರೆಯಲಾಗಿದ್ದ ಸರ್ವಪಕ್ಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್-19 ಲಸಿಕೆಗಾಗಿ ಹೆಚ್ಚು ಸಮಯ ಕಾಯುವ ಅಗತ್ಯ ಇಲ್ಲ ಮತ್ತು ಅದು ಕೆಲವೇ ವಾರಗಳಲ್ಲಿ ಸಿದ್ಧವಾಗಬಹುದು ಎಂದು ತಜ್ಞರು ನಂಬಿದ್ದಾರೆ ಎಂದರು.
ಭಾರತದ ಮೂರು ಲಸಿಕೆಗಳು ಸೇರಿದಂತೆ ಸುಮಾರು ಎಂಟು ಲಸಿಕೆಗಳು ಪ್ರಯೋಗದ ವಿವಿಧ ಹಂತದಲ್ಲಿವೆ. ಅವುಗಳನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.