ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಹೊರಡಿಸಲಾಗಿರುವ ಮಾರ್ಗಸೂಚಿಗಳ ಅನುಷ್ಠಾನ ಸೇರಿದಂತೆ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ ತೆಗೆದುಕೊಂಡಿರುವ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ವಿಸ್ತೃತ ವರದಿಯನ್ನು ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆ ಹಾಗೂ ಪಿಡುಗಿನಿಂದ ಮೃತಪಟ್ಟವರ ಸೂಕ್ತ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ವಿಚಾರಣೆ ಸಂದರ್ಭದಲ್ಲಿ ಈ ಸೂಚನೆಯನ್ನು ನೀಡಲಾಗಿದೆ. ಜೊತೆಗೆ ಇತ್ತೀಚೆಗೆ ಗುಜರಾತ್‌ನ ಅಹಮದಾಬಾದ್ ಹಾಗೂ ರಾಜ್‌ಕೋಟ್‌ನಲ್ಲಿನ ಆಸ್ಪತ್ರೆಗಳಲ್ಲಿ ನಡೆದ ಅಗ್ನಿ ಅವಘಡದ ಕುರಿತೂ ಸ್ವಯಂ ಪ್ರೇರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.
'ಮೂರು ದಿನದೊಳಗಾಗಿ ವಿಸ್ತೃತ ಪ್ರತಿಕ್ರಿಯೆಯ ಅಫಿಡಾವಿಟ್ ಸಲ್ಲಿಸಿ' ಎಂದು ಕೇಂದ್ರ ಹಾಗೂ ಗುಜರಾತ್ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಎಸ್.ರೆಡ್ಡಿ ಹಾಗೂ ಎಂ.ಆರ್.ಶಾ ಅವರಿದ್ದ ಪೀಠವು ಹೇಳಿತು. 'ಶುಕ್ರವಾರದೊಳಗಾಗಿ ರಾಜ್ಯಗಳೂ ಅಫಿಡಾವಿಟ್ ಸಲ್ಲಿಸಬೇಕು. ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಡಿ.ಎ. ಮೆಹ್ತಾ ಅವರ ಸನಮಿತಿಯು ತನಿಖೆ ನಡೆಸಲಿದೆ' ಎಂದು ನಿರ್ದೇಶಿಸಿದ ಪೀಠವು, ವಿಚಾರಣೆಯನ್ನು ಡಿ.14ಕ್ಕೆ ಮುಂದೂಡಿತು.