ಮುಂಬೈ: ಲೈಂಗಿಕ ಆರೋಗ್ಯ ಕುರಿತಂತೆ ಬರೆಯುತ್ತಿದ್ದ ಭಾರತದ ಖ್ಯಾತ ಲೈಂಗಿಕ ತಜ್ಞ ಡಾ. ಮಹೀಂದರ್ ವಾತ್ಸಾ (96) ನಿನ್ನೆ (ಡಿ.28) ನಿಧನರಾದರು.
ಮುಂಬೈ ಮಿರರ್ ನಲ್ಲಿ ಪ್ರಕಟವಾಗುತ್ತಿದ್ದ ಲೈಂಗಿಕ ಆರೋಗ್ಯ ಕುರಿತಂತೆ ಬರೆಯುತ್ತಿದ್ದ ಅವರ ಬರಹಗಳು "ಆಸ್ಕ್ ದಿ ಎಕ್ಸ್ ಪರ್ಟ್" ಎಂಬ ಅಂಕಣದ ಮೂಲಕ ಕಳೆದ 15 ವರ್ಷಗಳಿಂದ ಅತ್ಯಂತ ಜನಪ್ರಿಯವಾಗಿದ್ದವು. ಜನರು ಕೇಳುತ್ತಿದ್ದ ಪ್ರಶ್ನೆಗಳಿಗೆ ಹಾಸ್ಯಭರಿತ ಪ್ರತ್ಯುತ್ತರಗಳ ಮೂಲಕ ಸಾರ್ವಜನಿಕರಲ್ಲಿ ಲೈಂಗಿಕ ವಿಷಯಗಳ ಕುರಿತು ಅರಿವು ಮೂಡಿಸುತ್ತಿದ್ದರು ಡಾ. ಮಹೀಂದರ್ ವಾತ್ಸಾ "ನಮ್ಮ ತಂದೆ ಬಹು ಆಯಾಮದ ವ್ಯಕ್ತಿಯಾಗಿದ್ದರು, ಅವರಿಗೆ ಬೇಕಾದ ರೀತಿಯಲ್ಲಿ ಅದ್ಭುತ ಜೀವನ ನಡೆಸಿದರು" ಎಂದು ಡಾ.ವಾತ್ಸಾಯನ ಅವರ ಮಕ್ಕಳು ಹೇಳಿದ್ದಾರೆ. ಈಗಲೂ ಲೈಂಗಿಕ ಕ್ರಿಯೆಯ ಕುರಿತು ಮಡಿವಂತಿಕೆಯ ದೃಷ್ಟಿ ಹೊಂದಿರುವವರು ಅನೇಕರು ಇರುವ ದೇಶದಲ್ಲಿ, ವಾತ್ಸಾ ಹಲವಾರು ಅಭಿಮಾನಿಗಳನ್ನು ಹೊಂದಿದ್ದರು.
ಈ ಬಗ್ಗೆ ಮುಂಬೈ ಮಿರರ್ ನ ಸಂಪಾದಕರಾದ ಮೀನಾಲ್ ಬಘೇಲ್ ಸಹ ಟ್ವೀಟ್ ಮಾಡಿದ್ದು, ದಿ ಸೆಕ್ಸ್ಪರ್ಟ್ ಇನ್ನಿಲ್ಲ. ಮುಂಬೈ ಇನ್ಸ್ಟಿಟ್ಯೂಷನ್ ಡಾ.ಮಹೀಂದರ್ ವಾತ್ಸಾ ನಿಧನರಾಗಿದ್ದಾರೆ, 2005 ರಲ್ಲಿ ಮುಂಬೈ ಮಿರರ್ ಪ್ರಾರಂಭವಾದಾಗಿನಿಂದಲೂ 9 ದಿನಗಳ ಹಿಂದೆ ಪ್ರಕಟವಾಗಿದ್ದ ಇತ್ತೀಚಿನ ಆವೃತ್ತಿಯವರೆಗೂ ಅಡೆತಡೆಗಳಿಲ್ಲದೇ ಮಿರರ್ ಗೆ ಬರೆಯುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಡಾ.ವಾತ್ಸಾ 40 ವರ್ಷಗಳಿಂದ ಡಾ.ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದ ಅವರು ಲೈಂಗಿಕ ತಿಳುವಳಿಕ ಹಾಗೂ ಲೈಂಗಿಕ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದರು. 1974 ರಲ್ಲಿ ಮೊದಲ ಬಾರಿಗೆ ಈ ಸಂಸ್ಥೆ ಭಾರತದಲ್ಲಿ ಲೈಂಗಿಕ ಶಿಕ್ಷಣ ನೀಡುವ, ಸಲಹೆ ಹಾಗೂ ಥೆರೆಪಿ ಕೇಂದ್ರವನ್ನು ಪ್ರಾರಂಭಿಸಿತ್ತು.