ನವದೆಹಲಿ: ಅಳಿವಿನಂಚಿನಲ್ಲಿರುವ ಹೆಬ್ಬಕಗಳ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಸ್ತುತ ಇರುವ ಎಲ್ಲ ವಿದ್ಯುತ್ ತಂತಿಗಳ ಮೇಲೆ ಹಕ್ಕಿಗಳು ಕುಳಿತುಕೊಳ್ಳದಂತೆ ಉಪಕರಣಗಳನ್ನು(ಬರ್ಡ್ ಡೈವರ್ಟರ್ಸ್) ನಾಲ್ಕು ತಿಂಗಳೊಳಗಾಗಿ ಅಳವಡಿಸಬೇಕು ಹಾಗೂ ಹೊಸ ವಿದ್ಯುತ್ ಸರಬರಾಜು ತಂತಿಗಳನ್ನು ನೆಲದಾಳದಲ್ಲಿ ಹಾಕಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು(ಎನ್‌ಜಿಟಿ)ಸೂಚಿಸಿದೆ.
ಸೆಂಟರ್ ಫಾರ್ ವೈಲ್ಡ್‌ಲೈಫ್ ಆಯಂಡ್ ಎನ್ವೈರನ್‌ಮೆಂಟ್ ಲಿಟಿಗೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಎನ್‌ಜಿಟಿ ಮುಖ್ಯಸ್ಥರಾದ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ಅವರಿದ್ದ ಪ್ರಧಾನ ಪೀಠವು, ಈ ಆದೇಶ ಹೊರಡಿಸಿದೆ.
'ಹೆಬ್ಬಕಗಳು ಮೃತಪಡುತ್ತಿರುವುದಕ್ಕೆ ವಿದ್ಯುತ್ ತಂತಿಗಲೇ ಮುಖ್ಯ ಕಾರಣವಾಗುತ್ತಿದ್ದು, ಈಗಾಗಲೇ ಪೂರ್ಣಗೊಂಡಿರುವ ಯೋಜನೆಗಳಲ್ಲಿ ವಿದ್ಯುತ್ ತಂತಿಗಳನ್ನು ನೆಲದಾಳದಲ್ಲಿ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ, ಹಕ್ಕಿಗಳು ಇವುಗಳತ್ತ ಹೋಗದಂತೆ ಹಾಗೂ ತಂತಿ ಮೇಲೆ ಕುಳಿತುಕೊಳ್ಳದಂತೆ ಆದ್ಯತೆ ಮೇಲೆ ತಕ್ಷಣದಲ್ಲೇ ಉಪಕರಣಗಳನ್ನು ಅಳವಡಿಸಬೇಕು' ಎಂದು ಪೀಠವು ಸೂಚಿಸಿತು.
ಆರು ಸದಸ್ಯರ ತಜ್ಞರ ಸಮಿತಿಯ ಶಿಫಾರಸಿನಂತೆ, ಹೊಸ ಯೋಜನೆಗಳಲ್ಲಿ ನೆಲದಾಳದಲ್ಲಿ ವಿದ್ಯುತ್ ಸರಬರಾಜು ತಂತಿಗಳನ್ನು ಅಳವಡಿಸಬೇಕು. ಯೋಜನೆಗಳಿಗೆ ಒಪ್ಪಿಗೆ ನೀಡುವುದಕ್ಕೆ ಇದನ್ನು ಕಡ್ಡಾಯ ಷರತ್ತು ಮಾಡಬೇಕು ಎಂದು ಎನ್‌ಜಿಟಿ ಸೂಚಿಸಿತು.