ಕಾಸರಗೋಡು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2020-21 ರ ಸಾಲಿನ ವೈದ್ಯಕೀಯ/ತಾಂತ್ರಿಕ ಪ್ರವೇಶಕ್ಕೆ ನಡೆಸಿದ ಪರೀಕ್ಷೆಗಳಲ್ಲಿ ಕಾಸರಗೋಡು ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ನ್ಯಾಯವಾಗಿ ದೊರಕಬೇಕಾದ ಸೀಟುಗಳನ್ನು ಕೆಲವು ಮಲಯಾಳಿ ವಿದ್ಯಾರ್ಥಿಗಳು ವಾಮ ಮಾರ್ಗದ ಮೂಲಕ ದಕ್ಕಿಸಿಕೊಂಡಿರುವುದಕ್ಕೆ ಕನ್ನಡ ಹೋರಾಟ ಸಮಿತಿ ಸ`Éಯಲ್ಲಿ ಚರ್ಚಿಸಿ ಈ ಕುರಿತು ಸಮಗ್ರ ತನಿಖೆ ನಡೆಸಿ ಅನರ್ಹರ ಸೇರ್ಪಡೆ ಮಾಡಿದ್ದನ್ನು ತಡೆಹಿಡಿಯ ಬೇಕೆಂದು ಒತ್ತಾಯಿಸಲಾಯಿತು.
ಕಾಸರಗೋಡು ಬ್ಯಾಂಕ್ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಾಲಯದಲ್ಲಿ ನಡೆದ ಕನ್ನಡ ಹೋರಾಟ ಸಮಿತಿ ಸಭೆಯಲ್ಲಿ ಮುಂದೆ ಮಾಡಬೇಕಾದ ಹೋರಾಟದ ಕುರಿತು ಚರ್ಚಿಸಲಾಯಿತು. ಈ ರೀತಿಯ ಗಂಭೀರ ಸಮಸ್ಯೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತುರ್ತು ಸ್ಪಂದಿಸಿ ಶಾಶ್ವತ ಪರಿಹಾರ ಮಾಡಬೇಕೆಂದು ಸಭೆಯಲ್ಲಿ ಅಭಿಪ್ರಾಯ ಪಡಲಾಯಿತು.
ಈ ಕುರಿತು ಶೀಘ್ರದಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕರನ್ನು ಭೇಟಿಯಾಗಲು ಹೋರಾಟ ಸಮಿತಿಯ ನೇತೃತ್ವದಲ್ಲಿ ನಿಯೋಗ ತೆರಳಲು ಹಾಗು ನಿಯೋಗದಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರ ಪ್ರತಿನಿಧಿಗಳನ್ನು ಸೇರಿಸಲು ತೀರ್ಮಾನಿಸಲಾಯಿತು.
ಹೋರಾಟ ಸಮಿತಿಯ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆ ವಹಿಸಿ ಸಮಸ್ಯೆಗಳನ್ನು ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಭೆಯಲ್ಲಿ ಸಾಹಿತ್ಯ ಪರಿಷತ್ತು ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ಕಿರಣ್ ಕುಮಾರ್, ಶ್ರೀಶ ಕುಮಾರ್ ಪಿ., ಲೋಹಿತಾಕ್ಷ, ದಿನೇಶ್ ಚೆರುಗೋಳಿ, ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ವಿ.ಬಿ.ಕುಳಮರ್ವ ಮೊದಲಾದವರು ಮಾತನಾಡಿದರು. ಸತೀಶ್ ಮಾಸ್ತರ್ ವಂದಿಸಿದರು.