ನವದೆಹಲಿ: ಏಕ ಬಳಕೆಯ ಪ್ಲಾಸ್ಟಿಕ್‌ಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಮತ್ತು ಅದನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಯಶಸ್ವಿಯಾಗಿದೆ ಎಂದು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಈಗಾಗಲೇ ನಿಷೇಧಿಸಲಾಗಿದೆ. ಇದರ ಬಳಕೆ ನಿಲ್ಲಿಸುವ ಬಗ್ಗೆ ತಿಳಿವಳಿಕೆ ಮೂಡಿಸಲು ಅಭಿಯಾನಗಳನ್ನು ನಡೆಸಲಾಗಿದೆ. ಈ ವಿಚಾರದಲ್ಲಿ ನಾವು ಅದ್ಭುತ ಯಶಸ್ಸು ಸಾಧಿಸಿದ್ದು, ಇದಕ್ಕೊಂದು ತಾರ್ಕಿಕ ಅಂತ್ಯ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಹವಾಮಾನ ಬದಲಾವಣೆಗೆ ಸಂಬಂಧಿಸಿ ವಿಶ್ವಸಂಸ್ಥೆಯು ರೂಪಿಸಿರುವ ಚೌಕಟ್ಟಿಗೆ ಸಂಬಂಧಿಸಿ ಯುಎನ್‌ಎಫ್‌ಸಿಸಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಪೆಟ್ರೀಷಿಯಾ ಎಸ್ಪಿನೋಜ ಜತೆ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ಇಂದು ಅನೇಕ ದೇಶಗಳು ಹವಾಮಾನ ಬದಲಾವಣೆ ಕಾರ್ಯಸೂಚಿ ಸಾಕಾರಗೊಳಿಸುವ ಗಡುವನ್ನು 2050ಕ್ಕೆ ಮುಂದೂಡುತ್ತಿವೆ. ದೀರ್ಘಾವಧಿಯ ಗುರಿಯಿಂದಲೂ ಈಗಲೇ ಕ್ರಮ ಕೈಗೊಳ್ಳಬೇಕಾಗಿರುವುದು ಅಗತ್ಯ ಎಂದೂ ಜಾವಡೇಕರ್ ಹೇಳಿದ್ದಾರೆ.