ಬದಿಯಡ್ಕ: ಕೇರಳ ಸಹಿತ ಕಾಸರಗೋಡು ಜಿಲ್ಲೆಯ ಪ್ರಧಾನ ಕೃಷಿಗಳಲ್ಲಿ ಒಂದಾಗಿರುವ ಅಲ್ಪಾವಧಿ ಬೆಳೆಯೆನಿಸಿ ಆರ್ಥಿಕ ಸುಸ್ಥಿರತೆಗೆ ಭಾರೀ ಸಹಾಯಿಯಾದ ನೇಂದ್ರ ಬಾಳೆ ಬೆಳೆಯುವವರಿಗೆ ಬೆಲೆ ಕುಸಿತದ ಸಂಕಷ್ಟ ಎದುರಾಗಿದೆ.
ಸಾಮಾನ್ಯವಾಗಿ ಕಿಲೋ ಒಂದಕ್ಕೆ 35 ರಿಂದ 40 ರೂ. ಗಳಿಗೆ ವ್ಯಾಪಾರಿಗಳಿಗೆ ಮಾರಾಟವಾಗುತ್ತಿದ್ದ ನೇಂದ್ರ ಬಾಳೆಹಣ್ಣಿನ ಬೆಲೆ ಇದೀಗ ದಿಢೀರನೆ ಕುಸಿದು ಕಿಲೋಗೆ 20 ರಿಂದ 23 ರೂ.ಗೆ ರೈತ ಮಾರಾಟಮಾಡಬೇಕಾದ ಸ್ಥಿತಿ ಇದೆ. ಕೆಲವು ದಿನಗಳ ಹಿಂದೆ ಕೇವಲ 14-15 ರೂ.ಗಳಿಗೂ ಮಾರಾಟವಾದದ್ದಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ನೂರು ರೂ.ಗೆ ಮೂರರಿಂದ ಐದು ಕಿಲೋ ವರೆಗಿನ ಆಕóಕ ಬೆಲೆಯಲ್ಲಿ ಗ್ರಾಹಕರಿಗೆ ಬಾಳೆ ಹಣ್ಣು ಮಾರಾಟಗೈಯ್ಯುತ್ತಿರುವುದು ಕಂಡುಬಂದಿದೆ.
ಕೋವಿಡ್ ನಂತರದ ಆರ್ಥಿಕ-ವ್ಯಾಪಾರದ ಮೇಲಿನ ಹೊಡೆತ ಇತರ ಕ್ಷೇತ್ರಗಳಂತೆ ಕೃಷಿ ಮಾರುಕಟ್ಟೆಯ ಮೇಲೂ ಪ್ರಭಾವ ಬೀರತೊಡಗಿದ್ದು, ಈ ಹಿಂದೆ ಅಂತರಾಷ್ಟ್ರೀಯವಾಗಿ ರಫ್ತಾಗುತ್ತಿರುವುದು ಇದೀಗ ನಿಂತಿರುವುದರಿಂದ ನೇಂದ್ರ ಬಾಳೆಗೆ ಬೆಲೆ ಕುಸಿತ ಉಂಟಾಗಿದೆಯೆಂದು ಹೇಳಲಾಗಿದೆ. ಇದರೊಂದಿಗೆ ಲಾಕ್ ಡೌನ್ ಕಾಲದಲ್ಲಿ ಉದ್ಯೋಗ ಕಳೆದುಕೊಂಡ ಅನೇಕರು ವ್ಯಾಪಕ ಪ್ರಮಾಣದಲ್ಲಿ ಬಾಳೆ ಕೃಷಿಗೆ ತೊಡಗಿಸಿಕೊಂಡಿದ್ದರಿಂದ ಬಾಳೆಕಾಯಿ ಉತ್ಪಾದನೆಯಲ್ಲಿ ಭಾರೀ ಹೆಚ್ಚಳ ಉಂಟಾಗಿರುವುದೂ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಅಲ್ಲದೆ ಬಾಳೆಹಣ್ಣು ಬೀದಿ ಬದಿ ವ್ಯಾಪಕವಾಗಿ ಮಾರಾಟವಾಗುತ್ತಿದೆ. ಇದರಿಂದ ಅಂಗಡಿಗಳಲ್ಲಿ ವ್ಯಾಪಾರಿಗಳಿಗೆ ಬಾಳೆಹಣ್ಣು ವ್ಯಾಪಾರವೂ ಕುಸಿದಿದೆ.
ನೇಂದ್ರ ಬಾಳೆಹಣ್ಣಿನ ಬೆಲೆ ಕುಸಿತ ಗ್ರಾಹಕರಿಗೆ ವರದಾನವಾಗಿದ್ದರೆ, ಕೃಷಿಕರು ಸಂಕಷ್ಟ ಎದುರಿಸುವಂತಾಗಿದೆ. ಬೃಹತ್ ಮಟ್ಟದಲ್ಲಿ ವ್ಯಾವಹಾರಿಕ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಕೃಷಿ ನಡೆಸುತ್ತಿರವ ಕೃಷಿಕರಿಗೆ ಬೆಲೆ ಕುಸಿತ ಭಾರಿ ಹೊಡೆತ ನೀಡಿದೆ.
ಅಭಿಮತ:
ನೇಂದ್ರ ಬಾಳೆಯ ಹಠಾತ್ ಬೆಲೆ ಕುಸಿತ ಭಾರೀ ಹೊಡೆತ ನೀಡಿದೆ. ಬೃಹತ್ ಪ್ರಮಾಣದಲ್ಲಿ ಹೆಚ್ಚಳಗೊಂಡ ಬಾಳೆ ಕೃಷಿ ಮತ್ತು ಅದಕ್ಕೆ ಹೊಂದಿಕೊಂಡು ಕುಸಿದ ಮಾರುಕಟ್ಟೆಯ ಕಾರಣ ಬೆಲೆ ಕುಸಿತ ಉಂಟಾಗಿದ್ದು ತೀವ್ರ ಕಳವಳ ಉಂಟುಮಾಡಿದೆ. ಈಗಿನ ಸಂದರ್ಭಕ್ಕನುಸರಿಸಿ ಕನಿಷ್ಠ 30 ರಿಂದ 35 ರೂ.ಗಳಾದರೂ ಲಭ್ಯವಾಗದಿದ್ದರೆ ಬಾಳೆ ಕೃಷಿಕನಿಗೆ ಕೃಷಿ ಮುನ್ನಡೆಸಲು ಸಾಧ್ಯವಿಲ್ಲ. ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಪ್ರೋತ್ಸಾಹಿಸುವ, ರಪ್ತು ಉದ್ಯಮಕ್ಕೆ ಬಲ ನೀಡುವ ಮತ್ತು ವ್ಯಾಪಕ ಪ್ರಮಾಣದಲ್ಲಿ ಬೀದಿಬದಿಗಳಲ್ಲಿ ಅನಿಯಂತ್ರಿತವಾಗಿ ನಡೆಯುತ್ತಿರುವ ಮಾರಾಟ ವ್ಯವಸ್ಥೆಗೆ ಕಡಿವಾಣ ಹಾಕುವ ಅಗತ್ಯ ಇದೆ.
-ಉದಯಶಂಕರ ಭಟ್ ಪುದುಕೋಳಿ
ಪ್ರಗತಿಪರ ಕೃಷಿಕ, ಬೃಹತ್ ಪ್ರಮಾಣದ ನೇಂದ್ರ ಕೃಷಿಕರು.