ನವದೆಹಲಿ: ನೂತನ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವಂತೆಯೇ ಇಂದು ಕೃಷಿ ಯೂನಿಯನ್ ಗಳ ಮುಖಂಡರನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತುಕತೆಗೆ ಆಹ್ವಾನಿಸಿದ್ದಾರೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ವಿಜ್ಞಾನ ಭವನದಲ್ಲಿ ಸಭೆ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಡಿಸೆಂಬರ್ 3 ರಂದು ಮುಂದಿನ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ರೈತರು ಪ್ರತಿಭಟನೆಯನ್ನು ಮುಂದುವರೆಸಿರುವುದರಿಂದ ಮತ್ತು ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಡಿಸೆಂಬರ್ 3ಕ್ಕೂ ಮುಂಚಿತವಾಗಿ ಮಾತುಕತೆ ನಡೆಸುವುದು ಅಗತ್ಯವಾಗಿದ್ದು, ಪರಿಸ್ಥಿತಿಯನ್ನು ಪರಿಹರಿಸಬೇಕಾಗಿದೆ. ಆದ್ದರಿಂದ ವಿಜ್ಞಾನ ಭವನದಲ್ಲಿ ಎಲ್ಲಾ ಕಿಸಾನ್ ಯೂನಿಯನ್ ಗಳನ್ನು ಮಾತುಕತೆಗೆ ಆಹ್ವಾನಿಸಲಾಗಿದೆ ಎಂದು ಎಎನ್ ಐ ಸುದ್ದಿಸಂಸ್ಥೆಗೆ ತೋಮರ್ ಹೇಳಿದ್ದಾರೆ.
ಹೊಸದಾಗಿ ಜಾರಿಯಾದ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಸರ್ಕಾರದ ಜೊತೆಗಿನ ಮೊದಲ ಸುತ್ತಿನ ಸಭೆಯಲ್ಲಿ ಪಾಲ್ಗೊಳ್ಳುವ ಕಿಸಾನ್ ಯೂನಿಯನ್ ಗಳೊಂದಿಗೆ ಮಾತುಕತೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೋದಿ ನಾಯಕತ್ವದಲ್ಲಿ ಕಳೆದ ಆರು ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟುಗೊಳಿಸುವ ಅನೇಕ ಐತಿಹಾಸಿಕ ಕೆಲಸಗಳನ್ನು ಮಾಡಲಾಗಿದೆ. ನೂತನ ಕೃಷಿ ತಿದ್ದುಪಡಿ ಕಾನೂನುಗಳ ಬಗ್ಗೆ ರೈತರಲ್ಲಿ ಕೆಲವೊಂದು ತಪ್ಪು ಕಲ್ಪನೆಗಳಿವೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಷರತ್ತುಬದ್ಧ ಮಾತುಕತೆಯನ್ನು ತಿರಸ್ಕರಿಸುವ ರೈತರು, ಯಾವುದೇ ಷರತ್ತುಬದ್ಧ ಮಾತುಕತೆ ಮತ್ತು ರಾಷ್ಟ್ರ ರಾಜಧಾನಿಯ ಪ್ರವೇಶದ್ವಾರಗಳಲ್ಲಿ ನಿಬರ್ಂಧಿಸುವ ಬೆದರಿಕೆಯನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.