ಕುಂಬಳೆ: ತ್ರಿಸ್ತರ ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಪ್ರಚಾರದಲ್ಲಿ ಮುಳುಗೇಳುತ್ತಿರುವ ಮಧ್ಯೆ ಕಾಸರಗೋಡು ಡಿವೈಎಸ್ಪಿ ಪಿ ಬಾಲಕೃಷ್ಣನ್ ನಾಯರ್ ಅವರು ರಾಜಕೀಯ ಪಕ್ಷಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಜಗತ್ತು ಅನುಭವಿಸುತ್ತಿರುವ ದೊಡ್ಡ ದುರಂತದ ಬಗ್ಗೆ ಸದಾ ಜಾಗೃತರಾಗಿರಬೇಕು. ಯಾವ ಕಾರಣಕ್ಕೂ ಕೋವಿಡ್ ವೈರಸ್ ಬಾಧೆಯ ಬಗ್ಗೆ ಅವಗಣನೆ ಸಲ್ಲದು. ಕೊರೋನಾ ವೈರಸ್ ನಮ್ಮ ಸುತ್ತಲೂ ಈಗಲೂ ಇದೆ ಎಂಬ ಆಲೋಚನೆಯೊಂದಿಗೆ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬೇಕು. ಅಭ್ಯರ್ಥಿಯ ಜೊತೆಯಲ್ಲಿ ಗರಿಷ್ಠ ಐದು ಜನರಿಗೆ ಮಾತ್ರ ಅವಕಾಶವಿದೆ. ಅಭ್ಯರ್ಥಿಗಳಿಗೆ ರಸ್ತೆ ಪ್ರದರ್ಶನಗಳನ್ನು ನಿಷೇಧಿಸಲಾಗಿದೆ. ವಾಹನಗಳ ಬಳಕೆಗೆ ಕಟ್ಟುನಿಟ್ಟಿನ ನಿಬಂಧಗಳಿವೆ. ಅಭಿಯಾನಕ್ಕೆ ಬಳಸುವ ವಾಹನಗಳ ಸಂಖ್ಯೆಯನ್ನು ಮೂರು ಎಂದು ಈಗಾಗಲೇ ನಿಗದಿಪಡಿಸಲಾಗಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಮಾನಹಾನಿಕರ ರೀತಿಯಲ್ಲಿ ಪ್ರಚಾರ ಮಾಡಿದರೆ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದಿರುವರು.
ಚುನಾವಣೆ ಮುಗಿದ ಬಳಿಕ ಕೋವಿಡ್ ಎರಡನೇ ಹಂತದ ಹರಡುವಿಕೆ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಈ ಬಗೆಗಿನ ಜಾಗರೂಕತೆಯಿಂದ ಚುನಾವಣೆಯನ್ನು ಎದುರಿಸಬೇಕು. ಪೋಲೀಸರಿಂದ ಮಾತ್ರ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮತ್ತು ಕೋವಿಡ್ ವಿರುದ್ಧದ ಹೋರಾಟದಲ್ಲಿ ಎಲ್ಲಾ ವರ್ಗದ ಜನರು ಭಾಗವಹಿಸಬೇಕು ಎಂದು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ಹೇಳಿದರು.
ಕುಂಬಳೆ ಪೋಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಕುಂಬಳೆ ಸ್ಟೇಷನ್ ಹೌಸ್ ಅಧಿಕಾರಿ ಪಿ. ಪ್ರಮೋದ್ ಮತ್ತು ಎಸ್‍ಐ ಪಿವಿಕೆ ರಾಜೀವ್ ಉಪಸ್ಥಿತರಿದ್ದರು.