ನವದೆಹಲಿ: 1975ರ ತುರ್ತುಪರಿಸ್ಥಿತಿಯನ್ನು 'ಸಂಪೂರ್ಣ ಅಸಂವಿಧಾನಿಕ' ಎಂದು ಘೋಷಿಸುವಂತೆ ಆಗ್ರಹಿಸಿ 94 ವರ್ಷದ ಮಹಿಳೆ ಸಲ್ಲಿಸಿದ್ದ ಅರ್ಜಿಯ ಕುರಿತಾಗಿ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಕೆ ಕೌಲ್ ಅವರ ನೇತೃತ್ವದ ಪೀಠವು ಅರ್ಜಿ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದೆ. ಆದರೆ 45 ವರ್ಷಗಳ ಹಿಂದೆ ಹೇರಲಾದ ತುರ್ತುಪರಿಸ್ಥಿತಿಯ ಸಿಂಧುತ್ವವನ್ನು ಪರಿಶೀಲಿಸುವುದು ಕಾರ್ಯಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
'ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಬಾರದಿತ್ತು. ತುರ್ತುಪರಿಸ್ಥಿತಿ ಎಂಬುದು ವಂಚನೆ. ಇದರಿಂದಾಗಿ ಸಂವಿಧಾನದ ಮೇಲೆ 'ಅತಿದೊಡ್ಡ ಆಕ್ರಮಣ'ವಾಗಿದೆ. ನಮ್ಮ ಹಕ್ಕುಗಳನ್ನು ತಿಂಗಳುಗಳವರೆಗೆ ಅಮಾನತುಗೊಳಿಸಲಾಗಿತ್ತು' ಎಂದು ಅರ್ಜಿದಾರ ವೀರ ಸರೀನ್ ಅವರ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ವಿಚಾರಣೆ ವೇಳೆ ಹೇಳಿದರು.
1975ರ ಜೂನ್ 25ರ ಮಧ್ಯರಾತ್ರಿಯಂದು ಆಗೀನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದರು. ಮಾರ್ಚ್ 1977ರಲ್ಲಿ ತುರ್ತುಪರಿಸ್ಥಿತಿಯನ್ನು ಹಿಂಪಡೆಯಲಾಯಿತು.