ಹೊಸದಿಲ್ಲಿ : ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ವೈದ್ಯರು, ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಮೂಲಕ ಕೋವಿಡ್-19 ಸೋಂಕು ತಗುಲದಂತೆ ತಡೆಯುವ ಔಷಧಿಗಳನ್ನು ಶಿಫಾರಸ್ಸು ಮಾಡಬಹುದು; ಆದರೆ ಅವರು ತಮ್ಮ ಔಷಧಿ ಕೋವಿಡ್-19 ಸೋಂಕನ್ನು ಗುಣಪಡಿಸುತ್ತದೆ ಎಂದು ಹೇಳಿಕೊಳ್ಳುವಂತಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಎಸ್.ರೆಡ್ಡಿ ಮತ್ತು ಎಂ.ಆರ್.ಶಾ ಅವರಿದ್ದ ನ್ಯಾಯಪೀಠದ ಮುಂದೆ ಹೇಳಿಕೆ ನೀಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಔಷಧಿಗಳನ್ನು ಶಿಫಾರಸ್ಸು ಮಾಡುವಲ್ಲಿ ವೈದ್ಯರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮತ್ತು ಕೋವಿಡ್-19 ರೋಗಲಕ್ಷಣ ಹೊಂದಿರುವ ರೋಗಿಗಳ ಚಿಕಿತ್ಸೆಯಲ್ಲಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. "ಈ ಔಷಧಿ ಕೋವಿಡ್-19 ರೋಗವನ್ನು ಗುಣಪಡಿಸುತ್ತವೆ ಎಂದು ಹೇಳಿಕೊಳ್ಳುವಂತಿಲ್ಲ ಎನ್ನುವ ಷರತ್ತಿನ ಮೇಲೆಯೇ ಆಯುಷ್ ಸಚಿವಾಲಯ ಇವಕ್ಕೆ ಅನುಮೋದನೆ ನೀಡಿದೆ" ಎಂದು ಸ್ಪಷ್ಟಪಡಿಸಿದರು. ಈ ನಿಯಮಗಳನ್ನು ಆಯಷ್ ವೈದ್ಯರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದಂತೆ, ಕೋವಿಡ್ ಪಾಸಿಟಿವ್ ರೋಗಿಗಳಿಗೆ ಇತರ ಚಿಕಿತ್ಸೆಯ ಜತೆಗೆ ಹೋಮಿಯೋಪಥಿ ವೈದ್ಯರು ಔಷಧಿಗಳನ್ನು ಶಿಫಾರಸ್ಸು ಮಾಡಲು ಅನುಮತಿ ನೀಡಲಾಗಿದೆ. ಆದರೆ ಇವು ಕೋವಿಡ್ ಗುಣಪಡಿಸುತ್ತವೆ ಎಂದು ಪ್ರತಿಪಾದಿಸಿಕೊಳ್ಳಲಾಗದು; ಇದು ತಡೆಯಾತ್ಮಕ ಔಷಧ ಮತ್ತು ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವಂಥದ್ದು ಎಂದಷ್ಟೇ ಹೇಳಿಕೊಳ್ಳಬಹುದು ಎಂದು ಆಯುಷ್ ಸಚಿವಾಲಯ ಹೇಳಿದೆ.