ನವದೆಹಲಿ: ಯುಪಿಎ ಆಡಳಿತಾವಧಿಯಲ್ಲಿ ವಿಮಾನ ತಯಾರಿಕಾ ಕಂಪನಿ ಎಂಬ್ರೇಯರ್ ಜೊತೆ ನಡೆದ ರಕ್ಷಣಾ ಒಪ್ಪಂದಕ್ಕೆ ಸಂಬಂಧಿಸಿದ, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು(ಇ.ಡಿ) ಆರೋಪಪಟ್ಟಿ ಸಲ್ಲಿಸಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯು ಬುಧವಾರ ತಿಳಿಸಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ವಿಶೇಷ ನ್ಯಾಯಾಲಯದ ಎದುರು ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಬ್ರೆಜಿಲ್ ಮೂಲದ ಎಂಬ್ರೇಯರ್ ಎಸ್‌ಎ, ಇಂಟರ್‌ಡೇವ್ ಏವಿಯೇಷನ್ ಸರ್ವೀಸಸ್ ಪ್ರೈ.ಲಿ., ಕೆಆರ್‌ಬಿಎಲ್ ಲಿ., ಕೆಆರ್‌ಬಿಎಲ್ ಲಿ.ನ ನಿರ್ದೇಶಕ ಅನೂಪ್ ಕುಮಾರ್ ಗುಪ್ತಾ ಹಾಗೂ ಅನೂಪ್ ಕುಮಾರ್ ಗುಪ್ತಾ ಅವರ ಸಹೋದರ ಅನುರಾಗ್ ಪೊಟ್‌ದಾರ್ ಹಾಗು ಇತರರನ್ನು ಇಲ್ಲಿ ಹೆಸರಿಸಲಾಗಿದೆ ಎಂದು ಇ.ಡಿ ತಿಳಿಸಿದೆ. ಕೆಆರ್‌ಬಿಎಲ್ ಲಿ., ಇಂಡಿಯಾ ಗೇಟ್ ಬಾಸುಮತಿ ಅಕ್ಕಿಯ ಉತ್ಪಾದನಾ ಕಂಪನಿಯಾಗಿದೆ.
ಭಾರತದ ಅಂದಾಜು ₹1,471 ಕೋಟಿ ಮೊತ್ತದ ಒಪ್ಪಂದವನ್ನು ಪಡೆಯಲು ಕಿಕ್‌ಬ್ಯಾಕ್ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಭಾರತೀಯ ವಾಯುಪಡೆಯ 'ಏರ್‌ಬಾರ್ನ್ ಅರ್ಲಿ ವಾರ್ನಿಂಗ್ ಆಯಂಡ್ ಕಂಟ್ರೋಲ್(ಎಇಡಬ್ಲ್ಯುಆಯಂಡ್ ಸಿ) ಯೋಜನೆಗಾಗಿ ಇಎಂಬಿ-145 ವಿಮಾನ ಪೂರೈಕೆಗೆ ಅಂದಿನ ಸರ್ಕಾರ ನಿರ್ಧರಿಸಿತ್ತು.
'ಅಂದಾಜು ₹1,471 ಕೋಟಿ ಮೊತ್ತದ ಗುತ್ತಿಗೆ ಪಡೆದಿದ್ದ ಬ್ರೆಜಿಲ್‌ನ ಎಂಬ್ರೇಯರ್, ಗುತ್ತಿಗೆ ತನಗೆ ಸಿಗಲು ವಿಪಿನ್ ಖನ್ನಾ ಎಂಬ ಮಧ್ಯವರ್ತಿಗೆ ಅಂದಾಜು ₹40 ಕೋಟಿ ಹಣ ನೀಡಿತ್ತು. ಈ ಹಣವನ್ನು ಸಿಂಗಪುರದಲ್ಲಿರುವ ಸಹ ಸಂಸ್ಥೆ ಇಂಟರ್‌ಡೇವ್ ಏವಿಯೇಷನ್ ಸರ್ವೀಸಸ್‌ಗೆ ನಕಲಿ ಒಪ್ಪಂದದ ಮುಖಾಂತರ ವರ್ಗಾವಣೆ ಮಾಡಲಾಗಿತ್ತು. ಈ ಹಣದಲ್ಲಿ ಅಂದಾಜು ₹24 ಕೋಟಿಯನ್ನು ಇಂಟರ್‌ಡೇವ್, ದುಬೈನಲ್ಲಿರುವ ಕೆಆರ್‌ಬಿಲ್ ಡಿಎಂಸಿಸಿಗೆ ವರ್ಗಾಯಿಸಿತ್ತು. ಈ ಸಂಸ್ಥೆಯು ಕೆಆರ್‌ಬಿಎಲ್ ಲಿಮಿಟೆಡ್‌ನ ಸಹಸಂಸ್ಥೆಯಾಗಿದೆ. ನಂತರದಲ್ಲಿ ಈ ಹಣವು ಕೆಆರ್‌ಬಿಎಲ್ ಲಿಮಿಟೆಡ್ ಮುಖಾಂತರ ಭಾರತಕ್ಕೆ ಬಂದಿತ್ತು. ಇಂಟರ್‌ಡೇವ್ ಹಾಗೂ ಕೆಆರ್‌ಬಿಎಲ್ ಡಿಎಂಸಿಸಿ ನಡುವೆ ನಡೆದ ನಕಲಿ ಒಪ್ಪಂದಕ್ಕೆ ಅನೂಪ್ ಕುಮಾರ್ ಗುಪ್ತಾ ಸಹಿ ಹಾಕಿದ್ದರು. ಈ ಹಣವು ಕೆಆರ್‌ಬಿಎಲ್ ಲಿಮಿಟೆಡ್‌ನ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿತ್ತು' ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಕರಣದಲ್ಲಿ ಇಲ್ಲಿಯವರೆಗೂ ₹16.29 ಕೋಟಿ ಮೌಲ್ಯದ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ. ಸಿಬಿಐ ದಾಖಲಿಸಿರುವ ಎಫ್‌ಐಆರ್ ಆಧಾರದಲ್ಲಿ ಇ.ಡಿ, ಎಂಬ್ರೇಯರ್ ಕಂಪನಿ, ರಕ್ಷಣಾ ಇಲಾಖೆಯ ಅಧಿಕಾರಿಗಳು, ಮಧ್ಯವರ್ತಿ ವಿಪಿನ್ ಖನ್ನಾ, ಇಂಟರ್‌ಡೇವ್ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದೆ.