ಕಾಸರಗೋಡು: ಪೆರಿಯದ ಅವಳಿ ಕೊಲೆ ಪ್ರಕರಣ ಸಂಬಂಧ ಸಿಬಿಐ ತಂಡ ಕಲ್ಯೋಟ್ ಪ್ರದೇಶಕ್ಕೆ ಮಂಗಳವಾರ ಆಗಮಿಸಿತು. ಸಿಬಿಐ ತಿರುವನಂತಪುರ ಘಟಕದ ಉಸ್ತುವಾರಿಯ ನಂದಕುಮಾರನ್ ನಾಯರ್ ನೇತೃತ್ವದ ತಂಡ ಸ್ಥಳಕ್ಕೆ ತಲುಪಿ ಮಾಹಿತಿ ಸಂಗ್ರಹಿಸಿತು.
ಕೊಲೆ ಪ್ರಕರಣ ನಡೆದ ಸ್ಥಳ ಸಹಿತ ಪರಿಸರ ಪ್ರದೇಶವನ್ನು ತಂಡ ಪರಿಶೀಲನೆ ನಡೆಸಿದೆ. 2019ರ ಫೆ.17 ರಂದು ಕಲ್ಯೊಟ್ ನ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಅವರನ್ನು ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು. ಸ್ಥಳೀಯ ಪೋಲೀಸರು ಅಪರಾಧಿಗಳನ್ನು ಪತ್ತೆಹಚ್ಚಲು ವಿಫಲರಾದ ಹಿನ್ನೆಲೆಯಲ್ಲಿ ಬಳಿಕ ಕಾಂಗ್ರೆಸ್ಸ್ ಉನ್ನತ ನೇತಾರರು ಸಿಬಿಐ ತನಿಖೆಗೆ ಒತ್ತಾಯಿಸಿತ್ತು. ಆದರೆ ರಾಜ್ಯ ಸರ್ಕಾರ ಇದನ್ನು ನಿರಾಕರಿಸಿ ರಾಜ್ಯ ಪೋಲೀಸ್ ಅಪರಾಧ ಪತ್ತೆ ವಿಭಾಗ ತನಿಖೆ ನಡೆಸಿದರೆ ಸಾಕೆಂದು ತಿಳಿಸಿತ್ತು. ಇದರಿಂದ ಕುಪಿತರಾದ ಕಾಂಗ್ರೆಸ್ಸ್ ಮುಖಂಡರು ಸುಪ್ರೀಂ ಕೋರ್ಟ್ ನಲ್ಲಿ ದಾವೆಹೂಡಿ ರಾಜ್ಯ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿತ್ತು. ವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯವು ಕೊನೆಗೂ ಸಿಬಿಐ ತನಿಖೆಗೆ ಸೂಚನೆ ನೀಡಿ ತೀರ್ಪು ನೀಡಿತ್ತು. ಆದರೆ ರಾಜ್ಯ ಸರ್ಕಾರವು ಕೊಲೆ ಘಟನೆಗೆ ಸಂಬಂಧಿಸಿ ವರದಿಗಳನ್ನು ಹಸ್ತಾಂತರಿಸಲು ಭಾರೀ ನಿಧಾನಗತಿ ತೋರಿಸಿದ್ದರಿಂದ ಸಿಬಿಐಗೆ ಕ್ರಮ ಕೈಗೊಳ್ಳುವಲ್ಲಿ ತೊಂದರೆಗಳಾಗಿದ್ದು ಬಳಿಕ ಇದೀಗ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ವರದಿ ತರಿಸಿ ತನಿಖೆಗೆ ಚಾಲನೆ ನೀಡಿದೆ.