ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಟ ಅನಿಲ್ ನೆಡುಮಂಙಾಡ್ ಸ್ನಾನ ಮಾಡುತ್ತಿದ್ದ ವೇಳೆ ತೊಡುಪುಝದ ಬಳಿಯಿರುವ ಮಲಂಗರ ಡ್ಯಾಮ್ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಮಲಯಾಳಂ ನಟ ಜೋಜು ಜಾರ್ಜ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಪೀಸ್' ಚಿತ್ರದ ಚಿತ್ರೀಕರಣ ತೊಡುಪುಝದಲ್ಲಿ ನಡೆಯುತ್ತಿತ್ತು. ಚಿತ್ರೀಕರಣದ ಮಧ್ಯೆ ಬಿಡುವಿನ ಸಮಯದಲ್ಲಿ ತಮ್ಮ ಸಹನಟರೊಂದಿಗೆ ಮಲಂಗರ ಡ್ಯಾಮ್ ಗೆ ಸ್ನಾನಕ್ಕೆಂದು ತೆರಳಿದ್ದ ಅನಿಲ್ ಆಳವಿರುವ ಪ್ರದೇಶಕ್ಕೆ ಈಜಲು ತೆರಳಿದ್ದರು ಎನ್ನಲಾಗಿದೆ. ಬಳಿಕ ನೀರಿನ ಸೆಳೆತಕ್ಕೆ ಸಿಕ್ಕಿ ಅವರು ನಾಪತ್ತೆಯಾಗಿದ್ದು, ಮುಳುಗುತಜ್ಞರ ಸಹಾಯದೊಂದಿಗೆ ಮೃತದೇಹವನ್ನು ಮೇಲೆತ್ತಲಾಯಿತು ಎಂದು ತಿಳಿದು ಬಂದಿದೆ.
ಅನಿಲ್ ನೆಡುಮಂಙಾಡ್, ಪೃಥ್ವಿರಾಜ್ ಮತ್ತು ಬಿಜು ಮೆನನ್ ಅಭಿನಯದ 'ಅಯ್ಯಪ್ಪನುಮ್ ಕೋಶಿಯುಮ್' ಚಿತ್ರದಲ್ಲಿ ನಟಿಸಿದ್ದರು. ಇನ್ನುಳಿದಂತೆ ಕಮ್ಮಟ್ಟಿಪಡಮ್, ಞಾನ್ ಸ್ಟೀವ್ ಲೊಪೆಝ್, ಪೊರಿಂಜು ಮರಿಯಮ್ ಜೋಸ್ ಮುಂತಾದ ಸಿನಿಮಾಗಳು ಅವರಿಗೆ ಪ್ರಸಿದ್ಧಿ ನೀಡಿದ್ದವು.