'ನಿರಾಮಯ' ಒಂದು ಅಸಾಂಪ್ರದಾಯಿಕ ಕೃತಿ. ಇದು non-linear ಮಾದರಿಯ ರಚನೆ. ಇದು ಮೂಲತಃ ವೈದ್ಯಕೀಯ ಇತಿಹಾಸದ ಹಲವಾರು ಕವಲುಗಳನ್ನು ಚಿತ್ರಗಳ ಮೂಲಕ ಪರಿಚಯಿಸುವ ಕೃತಿ. ಈ ಕವಲುಗಳು ಒಂದೇ ಕಾಲದಲ್ಲಿ ವಿವಿಧ ದಿಕ್ಕುಗಳಲ್ಲಿ ಬೆಳೆದವು. ಹೀಗಾಗಿ, ಒಂದೊಂದೇ ಕವಲನ್ನು ಸ್ಥೂಲವಾಗಿ ಪರಿಚಯಿಸುತ್ತಾ ಹೋದಂತೆ ಕಾಲದ ಮಾಪನದಲ್ಲಿ ಹಿಂದೆ ಮುಂದೆ ಆಗಾಗ ಸಂಚಾರ ಮಾಡುತ್ತಾ ಹೋಗುವುದು ಪುಸ್ತಕದ ಅಗತ್ಯ.
ಇಡೀ ಪುಸ್ತಕದ ಪ್ರತಿಯೊಂದು ಪುಟದಲ್ಲಿಯೂ ಅಪರೂಪದ ಚಿತ್ರಗಳಿವೆ. ಪ್ರತಿಯೊಂದು ಚಿತ್ರವೂ ವೈದ್ಯಕೀಯ ಇತಿಹಾಸದ ಒಂದು ತುಣುಕನ್ನು ಪರಿಚಯಿಸುತ್ತವೆ. ಅದರ ಮುಂದಿನ ಹಂತವನ್ನು ಮುಂದಿನ ಚಿತ್ರದಲ್ಲಿ ಕಾಣಬಹುದು. ಪ್ರತಿಯೊಂದು ಚಿತ್ರದ ಜೊತೆ ಅದರ ಹಿನ್ನೆಲೆ, ಚಿತ್ರಕಾರ, ಆತನ ಕಾಲ, ಚಿತ್ರದ ಪ್ರಸಂಗ, ಮತ್ತು ವೈದ್ಯಕೀಯ ಇತಿಹಾಸದ ಬಗ್ಗೆ ಆ ಚಿತ್ರದ ವಿವರಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಂಕ್ಷಿಪ್ತವಾಗಿ ನೀಡಿದೆ. ಕಂಪ್ಯೂಟರ್ ನಲ್ಲಿ ಪ್ರತಿಯೊಂದು ಚಿತ್ರವನ್ನು ಕ್ಲಿಕ್ ಮಾಡಿದಾಗಲೂ ಅದು ಅಂತರ್ಜಾಲದಲ್ಲಿನ ಮೂಲ ಚಿತ್ರವನ್ನು ತೆರೆಯುತ್ತದೆ. ಇಂಗ್ಲೀಷ್ ಮಾಹಿತಿಯಲ್ಲಿ ಕೆಲವು ಪದಗಳು ನೀಲಿ ಬಣ್ಣದಲ್ಲಿವೆ. ಅಂತಹ ಪದಗಳನ್ನು ಕ್ಲಿಕ್ ಮಾಡಿದರೆ, ಆ ಪದಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿ ಇರುವ ಪುಟ ಅಂತರ್ಜಾಲದಲ್ಲಿ ತೆರೆದುಕೊಳ್ಳುತ್ತದೆ! ಹೀಗೆ, ಪ್ರತಿಯೊಂದು ಪುಟವೂ ಮಾಹಿತಿಯನ್ನು ಹಲವಾರು ಪಟ್ಟು ವಿಸ್ತರಿಸಬಲ್ಲದು!
ಚಿತ್ರಕಲೆ, ಇತಿಹಾಸ, ವೈದ್ಯಕೀಯ ವಿಷಯಗಳ ಪೈಕಿ ಯಾವುದೇ ಒಂದರಲ್ಲಿ ಆಸ್ಥೆಯುಳ್ಳ ಎಲ್ಲರಿಗೂ ಈ ಪುಸ್ತಕ ಬಹಳ ಆಪ್ತವಾಗುತ್ತದೆ. ಪುಸ್ತಕದ ಬಗ್ಗೆ ಯಾವುದೇ ಅಪೇಕ್ಷೆ ಇಲ್ಲದೆ ಕೇವಲ ಕುತೂಹಲಕ್ಕಾಗಿ ನೋಡುವವರನ್ನು ಕೂಡ 'ನಿರಾಮಯ' ತನ್ನೆಡೆಗೆ ಆಕರ್ಷಿಸುತ್ತದೆ! ಒಟ್ಟಿನಲ್ಲಿ, ಇದು ಪ್ರತಿಯೊಬ್ಬರೂ ನೋಡಬೇಕಾಗಿರುವ ಪುಸ್ತಕ. ಇದು, ವೈದ್ಯಕೀಯ ಇತಿಹಾಸದ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ 'ಕಾಫಿ-ಟೇಬಲ್' ಮಾದರಿಯ ಇ-ಪುಸ್ತಕವೂ ಹೌದು.
ಶತಮಾನಗಳ ಸಾಧಕರ ಅನನ್ಯ ಪ್ರತಿಭೆಗೆ ಬೆಳಕಿಂಡಿಯಾದ ಈ ಚಿತ್ರಗಳು ಎಲ್ಲ ಓದುಗರಲ್ಲೂ ಬೆರಗು ಮೂಡಿಸಲಿ ಎಂದು ನಾನು ಆಶಿಸುತ್ತೇನೆ. ಈ ನಿಟ್ಟಿನಲ್ಲಿ ವಿನೂತನ ಪ್ರಯತ್ನವಾದ 'ನಿರಾಮಯ' ಕನ್ನಡ ಓದುಗರ ಅಭಿಮಾನದಿಂದ ಬೆಳೆಯುತ್ತದೆ ಎಂದು ನಂಬಿಕೆಯೂ ನನಗಿದೆ.
ಮುಕ್ತ ಜ್ಞಾನ ಪ್ರಸರಣದ ಅಡಿಯಲ್ಲ 'ನಿರಾಮಯ' ಇ-ಪುಸ್ತಕ ಎಲ್ಲರಿಗೂ ಉಚಿತವಾಗಿ ದೊರಕುತ್ತಿದೆ.ಮುಕ್ತ ಜ್ಞಾನ ಪ್ರಸರಣದ ಅಡಿಯಲ್ಲಿ, ಹಿಂದಿನ 'ಸೆರೆಂಡಿಪಿಟಿ - ವೈದ್ಯಲೋಕದ ಅದ್ಭುತ ಆಕಸ್ಮಿಕಗಳು' ಇ-ಪುಸ್ತಕದ ರೀತಿಯಲ್ಲಿಯೇ 'ನಿರಾಮಯ' ಕೂಡ ಎಲ್ಲರಿಗೂ ಉಚಿತವಾಗಿ ದೊರಕುತ್ತಿದೆ. ಯಾರು ಬೇಕಾದರೂ 'ನಿರಾಮಯ'ವನ್ನು ಅಂತರಜಾಲದ ಮೂಲಕ ಉಚಿತವಾಗಿ ತಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ಗಳನ್ನು ಬಳಸಿ ಓದಿ, ಆನಂದಿಸಬಹುದು. ಪುಸ್ತಕವನ್ನು ಉಚಿತವಾಗಿ ಓದಲು ಈ ಕೊಂಡಿಗಳನ್ನು ಬಳಸಬಹುದು:
[ಇ-ಪುಸ್ತಕದ ಕೊಂಡಿ]
https://play.google.com/store/books/details?id=SLALEAAAQBAJ
[ಪಿಡಿಎಫ್ ಆವೃತ್ತಿಯ ಕೊಂಡಿ]
https://archive.org/details/niramaya-1607197361.-print