ಚೆನ್ನೈ: ನಿವಾರ್ ಚಂಡಮಾರುತದ ಬೆನ್ನಲ್ಲೇ ತಮಿಳುನಾಡಿಗೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಸೋಮವಾರ ವಾಯುಭಾರ ಕುಸಿತ ಉಂಟಾಗಿದ್ದು, ಇದು ಮುಂದಿನ ದಿನಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಇದರ ಪರಿಣಾಮ ಡಿ.2 ಮತ್ತು 3ರಂದು ದಕ್ಷಿಣ ತಮಿಳುನಾಡು ಹಾಗೂ ದಕ್ಷಿಣ ಕೇರಳದಲ್ಲಿ ಭಾರಿ ಮಳೆ ಐಎಂಡಿ ನೀಡಿದೆ.
ಡಿ.3ರಂದು ತಮಿಳುನಾಡಿನ ಕನ್ಯಾಕುಮಾರಿಗೆ ಚಂಡಮಾರುತವು ಅಪ್ಪಳಿಸುವ ಸಾಧ್ಯತೆ ಇದೆ. ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡು, ಕೇರಳ, ಪಾಂಡಿಚೇರಿ, ಕರೈಕಲ್, ಮಾಹೆ, ಆಂಧ್ರಪ್ರದೇಶದ ಕರಾವಳಿ ಭಾಗ, ಲಕ್ಷದ್ವೀಪದಲ್ಲಿ ಮಳೆ ಮುನ್ಸೂಚನೆಯನ್ನು ಐಎಂಡಿ ನೀಡಿದೆ. ಡಿ.2ರಂದು ಕೊಮೊರಿನ್ ಪ್ರದೇಶ, ಗಲ್ಫ್ ಆಫ್ ಮನ್ನಾರ್, ದಕ್ಷಿಣ ತಮಿಳುನಾಡು, ಕೇರಳದ ಕರಾವಳಿಯಲ್ಲಿ ಸಮುದ್ರದುಬ್ಬರ ತೀವ್ರವಾಗಿರಲಿದ್ದು, ಗಂಟೆಗೆ65 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.ಡಿ.4ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಐಎಂಡಿ ಎಚ್ಚರಿಸಿದೆ.