ತಿರುವನಂತಪುರ: ಆರ್‍ಎಸ್‍ಎಸ್ ಸರಸಂಘ ಚಾಲಕರಾಗಿದ್ದ ಎಂ.ಎಸ್.ಗೋಳ್ವಲ್ಕರ್ ಅವರ ಹೆಸರನ್ನು ತಿರುವನಂತಪುರ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರದ ಎರಡನೇ ಕ್ಯಾಂಪಸ್‍ಗೆ ಹೆಸರಿಸಲು ಕೇಂದ್ರ ಸರ್ಕಾರ ಪ್ರಕಟಿಸಿರುವ ನಿರ್ಧಾರ ಭಾರೀ ವಿವಾದದಲ್ಲಿದೆ. ಕಿನ್‍ಫ್ರಾ ಪಾರ್ಕ್‍ನಲ್ಲಿ ಸ್ಥಾಪಿಸಲಿರುವ ಆರ್‍ಜಿಸಿಬಿಯ ಎರಡನೇ ಕ್ಯಾಂಪಸ್‍ಗೆ ಗೋಳ್ವಲ್ಕರ್ ಹೆಸರಿಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ನಿನ್ನೆ ಘೋಷಿಸಿದ್ದರ ಬೆನ್ನಿಗೆ ಭಾರೀ ಪ್ರತಿಭಟನೆಗಳು ವ್ಯಕ್ತವಾಗಿದೆ.
ಕೇಂದ್ರದ ನಿರ್ಧಾರ ಹೊರಬರುತ್ತಿರುವಂತೆ ಸಿಪಿಎಂ, ಸಿಪಿಐ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸೇರಿದಂತೆ ರಾಜಕೀಯ ಪಕ್ಷದ ಮುಖಂಡರು ತೀವ್ರ ಟೀಕೆ ನಡೆಸಿ ಕೇಂದ್ರದ ಕಸಿವಿಸಿಗೆ ಕಾರಣವಾಯಿತು.
ಕೋಮು ವಿಭಜನೆಯ ಮೂಲಕ ಅದರ ಲಾಭ ಗಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. ಎಂ.ಎ ಬೇಬಿ ಪ್ರತಿಕ್ರಿಯಿಸಿ ಜಾತ್ಯತೀತ ಕೇರಳವನ್ನು ಭಾರತವು ಹಿಂದೆಂದೂ ನೋಡದ ಶ್ರೇಷ್ಠ ಜನಾಂಗೀಯ ವ್ಯಕ್ತಿಯ ಹೆಸರಿರಿಸುವ ಹುನ್ನಾರದ ಮೂಲಕ ರಾಜ್ಯವನ್ನು ಅವಮಾನಿಸಿದೆ ಎಂದು ಆರೋಪಿಸಿದರು.
ಕೇರಳದಲ್ಲಿ ಕೋಮು ವೈಷಮ್ಯವನ್ನು ಸೃಷ್ಟಿಸಿ ಅದರ ಲಾಭವನ್ನು ಪಡೆಯುವ ಹುನ್ನಾರದ ಹಿಂದೆ ಆರ್ ಎಸ್ ಎಸ್ ಇದೆ. ಮತ್ತು ಒಟ್ಟಾರೆಯಾಗಿ ಕೇರಳದ ಜಾತ್ಯಾತೀತ ಸಮುದಾಯ ಈ ಕ್ರಮವನ್ನು ವಿರೋಧಿಸಬೇಕು ಎಂದು ಅವರು ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.
ಈ ನಿರ್ಧಾರವನ್ನು ಹಿಂಪಡೆಯಲು ಮತ್ತು ಗೋಳ್ವಲ್ಕರ್ ಹೆಸರಿಡದಂತೆ ಕೋರಿ ಸಂಸದ ಬಿನೊಯ್ ವಿಶ್ವಂ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.
9