ನವದೆಹಲಿ: ವ್ಯಕ್ತಿಯೊಬ್ಬ ತಾನು ಸಾಕಿದ್ದ ಐದು ತಿಂಗಳ ನಾಯಿ ಮರಿಯನ್ನು ಕ್ರೂರವಾಗಿ ಹೊಡೆದು ಹಿಂಸೆ ನೀಡಿದ್ದು, ಈ ವಿಡಿಯೋ ವೈರಲ್ ಆದ ನಂತರ ಆತನನ್ನು ಕೆಲಸದಿಂದ ಕಂಪನಿ ವಜಾಗೊಳಿಸಿದೆ.
ನೊಯ್ಡಾದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ರಿಷಬ್ ಮೆಹ್ರಾ ಎಂಬಾತ ಕೆಲಸ ಮಾಡುತ್ತಿದ್ದು, ಈತ ತಾನು ಸಾಕಿದ್ದ ನಾಯಿಯನ್ನು ನಿರ್ದಯವಾಗಿ ಥಳಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ದೃಶ್ಯವನ್ನು ಆತ ವಾಸವಿದ್ದ ಅಪಾರ್ಟ್ಮೆಂಟ್ ನೆರೆಹೊರೆಯವರು ಸೆರೆ ಹಿಡಿದಿದ್ದು, ತಿಂಗಳ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿತ್ತು.
ಈತನ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಗೊಂಡಿದ್ದು, ಆರೋಪಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಾಣಿ ದಯಾ ಸಂಘದವರು ಒತ್ತಾಯಿಸಿದ್ದರು. ದನಿಯಿಲ್ಲದ ಈ ಪ್ರಾಣಿ ಬಗ್ಗೆ ವ್ಯಕ್ತಿಯೊಬ್ಬ ಇಷ್ಟು ಕ್ರೂರನಾಗಲು ಹೇಗೆ ಸಾಧ್ಯ. ಈತ ಒಳ್ಳೆ ಮನುಷ್ಯನಾಗಿರಲು ಸಾಧ್ಯವಿಲ್ಲ, ಜೊತೆಗೆ ಒಳ್ಳೆ ನೌಕರನೂ ಆಗಲಾರ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ಆನ್ ಲೈನ್ ಕ್ಯಾಂಪೇನ್ ಕೂಡ ಆರಂಭಿಸಿದ್ದರು. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಸಂಗತಿ ಗಮನಕ್ಕೆ ಬರುತ್ತಿದ್ದಂತೆ ಕಂಪನಿ ಆಡಳಿತ ಮಂಡಳಿ ಆತನನ್ನು ಕೆಲಸದಿಂದ ವಜಾ ಮಾಡಿದೆ. "ಈ ವಿಷಯವನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ. ಈತ ನಮ್ಮ ಕಂಪನಿಯಲ್ಲಿ ಈಗ ಇಲ್ಲ" ಎಂದು ಕಂಪನಿ ಆನ್ ಲೈನ್ ಕ್ಯಾಂಪೇನ್ ಗೆ ಡಿ.25ರಂದು ಉತ್ತರಿಸಿದೆ. ಅಕ್ಟೋಬರ್ 25ರಂದು ಈ ಘಟನೆ ನಡೆದಿದ್ದು, ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಶ್ವಾನವನ್ನು ರಕ್ಷಿಸಿದ್ದಾರೆ.