ಹೊಸದಿಲ್ಲಿ,: ವಿಶ್ವಾದ್ಯಂತ ತಮ್ಮ ಕೆಲಸಕ್ಕೆ ಪ್ರತೀಕಾರವಾಗಿ ಕೊಲೆಯಾಗಿರುವ ಪತ್ರಕರ್ತರ ಸಂಖ್ಯೆ ಈ ವರ್ಷ ದುಪ್ಪಟ್ಟಾಗಿದೆ ಎಂದು ನ್ಯೂಯಾರ್ಕ್‌ನ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ (ಸಿಪಿಜೆ) ಮಂಗಳವಾರ ಪ್ರಕಟಿಸಿರುವ ತನ್ನ ವರದಿಯಲ್ಲಿ ತಿಳಿಸಿದೆ.
2019ರಲ್ಲಿ ತಮ್ಮ ಕೆಲಸಕ್ಕೆ ಪ್ರತೀಕಾರವಾಗಿ 10 ಪತ್ರಕರ್ತರು ಕೊಲೆಯಾಗಿದ್ದರು. ಈ ವರ್ಷ ಹೀಗೆ ಕೊಲೆಯಾದ ಪತ್ರಕರ್ತರ ಸಂಖ್ಯೆ 21ಕ್ಕೇರಿದೆ ಎಂದು ವರದಿಯು ಹೇಳಿದೆ. ಉತ್ತರ ಪ್ರದೇಶದಲ್ಲಿ ಕೊಲೆಯಾದ ಪತ್ರಕರ್ತರಾದ ರಾಕೇಶ್ ಸಿಂಗ್ ಮತ್ತು ಶುಭಮ್ ಮಣಿ ತ್ರಿಪಾಠಿ ಅವರ ಹೆಸರುಗಳೂ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿವೆ.
ಈ ವರ್ಷದ ಜ.1ರಿಂದ ಡಿ.15ರವರೆಗಿನ ಅವಧಿಯಲ್ಲಿ ಒಟ್ಟು 30 ಪತ್ರಕರ್ತರು ಮೃತಪಟ್ಟಿದ್ದು,ಈ ಪೈಕಿ 21 ಜನರು ತಮ್ಮ ಕೆಲಸಕ್ಕಾಗಿ ಕೊಲೆಯಾಗಿದ್ದಾರೆ. ಮೂವರು ಎರಡು ಗುಂಪುಗಳ ನಡುವಿನ ಗುಂಡುಗಳ ಹಾರಾಟಕ್ಕೆ ಸಿಲುಕಿ ಮೃತರಾಗಿದ್ದರೆ, ಆರು ಜನರು ಅಪಾಯಕಾರಿ ಕರ್ತವ್ಯಗಳ ನಿರ್ವಹಣೆಯ ವೇಳೆಗೆ ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ ಓರ್ವ ಮಾಧ್ಯಮ ಉದ್ಯೋಗಿಯೋರ್ವ ಕೂಡ ಕೊಲ್ಲಲ್ಪಟ್ಟಿದ್ದಾನೆ. ಇನ್ನೂ 15 ಪತ್ರಕರ್ತರ ಸಾವುಗಳ ಬಗ್ಗೆ ತನಿಖೆ ನಡೆಸುತ್ತಿರುವ ಸಿಪಿಜೆ,ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಅವರು ಕೊಲ್ಲಲ್ಪಟ್ಟಿದ್ದಾರೆಯೇ ಎನ್ನುವುದನ್ನು ಪರಿಶೀಲಿಸುತ್ತಿದೆ.
ಭಾರತದ ಜೊತೆಗೆ ಅಫಘಾನಿಸ್ತಾನ, ಬಾಂಗ್ಲಾದೇಶ, ಬಾರ್ಬಡೋಸ್, ಕೋಲಂಬಿಯಾ, ಹೊಂಡುರಾಸ್, ಇರಾನ್, ಇರಾಕ್, ಮೆಕ್ಸಿಕೊ, ನೈಜೀರಿಯಾ, ಪೆರಾಗ್ವೆ, ಫಿಲಿಪ್ಪೀನ್ಸ್, ಸೋಮಾಲಿಯಾ, ಸಿರಿಯಾ ಮತ್ತು ಯೆಮೆನ್ ಈ ವರದಿಯಲ್ಲಿ ಉಲ್ಲೇಖಿಸಲ್ಪ ಟ್ಟಿವೆ.
ನ.28ರಂದು ಉತ್ತರ ಪ್ರದೇಶದ ಬಲರಾಮಪುರ ಜಿಲ್ಲೆಯಲ್ಲಿ 'ರಾಷ್ಟ್ರೀಯ ಸ್ವರೂಪ್'ನ ಪತ್ರಕರ್ತ ರಾಕೇಶ್ ಸಿಂಗ್ ನಿರ್ಭಿಕ್ ಮತ್ತು ಅವರ ಸ್ನೇಹಿತನ ಮೇಲೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಲಾಗಿತ್ತು. ತೀವ್ರ ಸುಟ್ಟ ಗಾಯಗಳಾಗಿದ್ದ ಅವರು ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನ.30ರಂದು ಪೊಲೀಸರು ಸ್ಥಳೀಯ ಗ್ರಾಮ ಮುಖ್ಯಸ್ಥೆಯ ಪುತ್ರ ಸೇರಿದಂತೆ ಮೂವರನ್ನು ಬಂಧಿಸಿದ್ದರು. ರಾಜ್ಯದಲ್ಲಿ ಪಂಚಾಯತ್ ಚುನಾವಣೆಗಳಿಗೆ ಮುನ್ನ ನಿರ್ಭಿಕ್ ಗ್ರಾಮ ಮುಖ್ಯಸ್ಥೆಯ ಭ್ರಷ್ಟಾಚಾರದ ವಿರುದ್ಧ ವರದಿ ಮಾಡಿದ್ದು ಈ ಕೃತ್ಯಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಜೂ.19ರಂದು ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ 'ಕಾಂಪು ಮೇಲ್'ನ ಪತ್ರಕರ್ತ ಶುಭಮ್ ಮಣಿ ತ್ರಿಪಾಠಿ ಅವರನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಭೂವಿವಾದಗಳ ಬಗ್ಗೆ ವರದಿ ಮಾಡುತ್ತಿದ್ದ ತ್ರಿಪಾಠಿಯವರ ಕೊಲೆ ಮರಳು ಮಾಫಿಯಾ ಮತ್ತು ಭೂ ಅತಿಕ್ರಮಿಗಳ ಸೂಚನೆಯಂತೆ ನಡೆದಿತ್ತು ಎನ್ನಲಾಗಿದೆ.