ಕಾಸರಗೋಡು: ಅಪ್ರಾಪ್ತವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯೆ ಷಾಹಿದಾ ಕಮಾಲ್ ಅವರು ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆಯೋಗದ ಅದಾಲತ್ ನಂತರ ಅವರು ಮಾತನಾಡಿದರು.
ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಅಪ್ರಾಪ್ತವಯಸ್ಕರ ಮೇಲಿನ ಪೀಡನೆ ಪ್ರಕರಣಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದರು.
ಪೋಷಣೆಯ ಹೊಣೆಹೊತ್ತವರು ಅಪ್ರಾಪ್ತವಯಸ್ಕರನ್ನು ಅನಾಥಾಲಯಗಳಿಗೆ ಸೇರಿಸುತ್ತಿರುವ ಮನೋಧರ್ಮ ಕೇರಳದಲ್ಲಿ ಅಧಿಕಗೊಳ್ಳುತ್ತಿದೆ. ಇಂಥಾ ಕ್ರಮಗಳು ಸಾಂಸ್ಕøತಿಕ ಕೇರಳಕ್ಕೆ ಅಪಮಾನಕಾರಿಗಳಾಗಿವೆ ಎಂದರು.
ಕ್ಷುಲ್ಲಕ ಕಾರಣಗಳಿಗೆ ಆಯೋಗಕ್ಕೆ ದೂರು ಸಲ್ಲಿಸಬೇಡಿ:
ಕ್ಷುಲ್ಲಕ ಕಾರಣಗಳಿಗೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಕೂಡದು ಎಂದು ಸದಸ್ಯೆ ಷಾಹಿದಾ ಕಮಾಲ್ ಅವರು ತಿಳಿಸಿದರು.
ನೆರೆಮನೆಯವರೊಂದಿಗಿನ ಕ್ಷುಲ್ಲಕ ಜಗಳ ಕುರಿತು ದೂರು ಸಲ್ಲಿಸುವ ಮನೋಧರ್ಮ ರಾಜ್ಯದಲ್ಲಿ ಅಧಿಕಗೊಳ್ಳುತ್ತಿದೆ. ಇಂಥಾ ಅಹವಾಲುಗಳನ್ನು ಆಲಿಸಲು ಆಯೋಗದ ಅಪಾರ ಸಮಯ ವ್ಯಯವಾಗುತ್ತಿದೆ. ಈ ಸಾಲಿಗೆ ಸೇರುವ 4 ದೂರುಗಳು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ 2 ದಿನಗಳ ಅದಾಲತ್ ನಲ್ಲೂ ಲಭಿಸಿವೆ. ಈ ಮೂಲಕ ಗಂಭೀರ ಸಮಸ್ಯೆಗಳ ಪರಿಶೀಲನೆಗೆ ಸಮಯದ ಕೊರತೆ ಕಾಡುವ ಸಾಧ್ಯತೆಗಳಿವೆ.
ನೀಲೇಶ್ವರದಲ್ಲಿ ವೃಧ್ಧೆಯೊಬ್ಬರಿಗೆ ಪತಿಯ ಸಹೋದರ ಮತ್ತು ಅವರ ಪತ್ನಿ ಮಾನಸಿಕ ಹಿಂಸೆ ನಿಡುತ್ತಿರುವ ಸಂಬಂಧ ಸಲ್ಲಿಸಿದ ದೂರಿನಲ್ಲಿ ವೃದ್ಧೆಯ ಮನೆಗೆ ತೆರಳಿ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಹಿಳಾ ಸಂರಕ್ಷಣೆ ಅಧಿಕಾರಿಗೆ ಮಹಿಳಾ ಆಯೋಗ ಆದೇಶ ನೀಡಿದೆ.
2ನೇ ದಿನ 37 ದೂರುಗಳ ಪರಿಶೀಲನೆ, 15 ದೂರುಗಳಿಗೆ ತೀರ್ಪು:
ಅದಾಲತ್ ನ 2 ನೇ ದಿನವಾಗಿದ್ದ ಮಂಗಳವಾರ 37 ದೂರುಗಳನ್ನು ಪರಿಶೀಲಿಸಲಾಗಿದ್ದು, 15 ದೂರುಗಳಿಗೆ ತೀರ್ಪು ನೀಡಲಾಗಿದೆ. 5 ದೂರುಗಳಲ್ಲಿ ಮಹಿಳಾ ಆಯೋಗ ಸಂಬಂಧ ಪಟ್ಟ ಇಲಾಖೆಗಳಿಂದ ವರದಿ ಆಗ್ರಹಿಸಿದೆ. ಉಳಿದ ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಶೀಲಿಸುವುದಾಗಿ ತಿಳಿಸಲಾಗಿದೆ.
ಒಟ್ಟು 27 ದೂರುಗಳಿಗೆ ತೀರ್ಪು:
2 ದಿನಗಳ ಕಾಲ ಕಾಸರಗೋಡು ಜಿಲ್ಲೆಯಲ್ಲಿ ನಡೆದ ಅದಾಲತ್ ನಲ್ಲಿ ಒಟ್ಟು 27 ದೂರುಗಳಿಗೆ ತೀರ್ಪು ನೀಡಲಾಗಿದೆ. ಒಟ್ಟು 74 ದೂರುಗಳ ಪರೀಶೀಲನೆ ನಡೆಸಲಾಗಿತ್ತು. ಇವುಗಳಲ್ಲಿ 9 ದೂರುಗಳಿಗೆ ಸಂಬಂಧಪಟ್ಟ ಇಲಾಖೆಗಳಿಂದ ವರದಿ ಬಯಸಲಾಗಿದೆ. ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಅದಾಲತ್ ಜರುಗಿತ್ತು.
ಅದಾಲತ್ ಗೆ ಸದಸ್ಯೆಯರಾದ ಇ.ಎಂ.ರಾಧಾ, ಷಾಹಿದಾ ಕಮಾಲ್ ನೇತೃತ್ವ ವಹಿಸಿದ್ದರು. ಕಾಸರಗೋಡು ಮಹಿಲಾ ಘಟಕದ ಎಸ್.ಐ. ಸಿ.ಭಾನುಮತಿ, ನ್ಯಾಯವಾದಿಗಳಾದ ಪಿ.ಸಿಂದು, ರೇಣುಕಾದೇವಿ, ಹಿರಿಯ ಸಿ.ಪಿ.ಒ.ಪಿ.ಶಾಂತಾ,ಸಿ.ಪಿ.ಒ.ಜಯಶ್ರೀ, ಕೌನ್ಸಿಲರ್ ರಮ್ಯಾ ಉಪಸ್ಥಿತರಿದ್ದರು.