ಅಹಮದಾಬಾದ್: ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ಮನಸುಖ್ ಭಾಯಿ ವಸಾವಾ ಅವರು ಪಕ್ಷಕ್ಕೆ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ವಸಾವಾ,' ಸಂಸದನಾಗಿ ಮುಂದುವರಿದರೆ ಮಾತ್ರ ಬೆನ್ನು ನೋವು ಮತ್ತು ಕುತ್ತಿಗೆ ನೋವಿಗೆ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಆ ಸೌಲಭ್ಯ ನನಗೆ ಸಿಗುವುದಿಲ್ಲ . ಹಾಗಾಗಿ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡು ಮತ್ತೆ ಕೆಲಸಗಳಲ್ಲಿ ಭಾಗಿಯಾಗುವಂತೆ ಹಿರಿಯ ನಾಯಕರು ನನಗೆ ಸಲಹೆ ನೀಡಿದರು' ಎಂದರು.
'ಈ ಬಗ್ಗೆ ಮುಖ್ಯ ಜೊತೆ ಚರ್ಚೆ ನಡೆಸಿದ್ದೇನೆ. ಬಿಜೆಪಿಯ ಹಿರಿಯ ನಾಯಕರು ಸಮಾಧಾನಪಡಿಸಿದರು. ಹಾಗಾಗಿ ರಾಜೀನಾಮೆ ಹಿಂಪಡೆದು, ಪಕ್ಷದಲ್ಲಿ ಮುಂದುವರಿಯಲಿದ್ದೇನೆ. ಅಲ್ಲದೆ ಸಂಸದನಾಗಿ ಸೇವೆ ಸಲ್ಲಿಸಲು ನಿರ್ಧರಿಸಿದ್ದೇನೆ' ಎಂದು ತಿಳಿಸಿದರು.
ವಸಾವಾ ಅವರು ಬಿಜೆಪಿ ತೊರೆಯುವುದಾಗಿ ಮಂಗಳವಾರ ಅಷ್ಟೇ ಘೋಷಿಸಿದ್ದರು.
ನರ್ಮದಾ ಜಿಲ್ಲೆಯ ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ವಿಷಯ ಮತ್ತು 121 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯದಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ವಸಾವಾ ಅವರಿಗೆ ಸರ್ಕಾರದ ಮೇಲೆ ಅಸಮಾಧಾನವಿತ್ತು. ಅದಕ್ಕಾಗಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ವಸಾವಾ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.