ನವದೆಹಲಿ: ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಬುಧವಾರ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಬುರೆವಿ ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಡಿಸೆಂಬರ್ 4ಕ್ಕೆ ಚಂಡುಮಾರುತ ತಮಿಳುನಾಡಿಗೆ ಅಪ್ಪಳಿಸುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ವಿಭಾಗ ಮಂಗಳವಾರ ಹೇಳಿತ್ತು. ಡಿಸೆಂಬರ್ 3 ರಂದು ಕೇರಳ ಮತ್ತು ದಕ್ಷಿಣ ತಮಿಳುನಾಡಿನಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಆಲರ್ಟ್ ಘೋಷಿಸಿದೆ.
ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿರುವ ವಿಷಯವನ್ನು ಟ್ವೀಟರ್ ನಲ್ಲಿ ತಿಳಿಸಿರುವ ಪ್ರಧಾನಿ ಮೋದಿ, ಬುರೆವಿ ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದು, ಉಭಯ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಚಂಡುಮಾರುತ ಭಾದಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಗಾಗಿ ಪ್ರಾರ್ಥಿಸುವುದಾಗಿ ನರೇಂದ್ರ ಮೋದಿ ಹೇಳಿದ್ದಾರೆ.