ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಿದ ಶಾಲಾ ಕಾಲೇಜುಗಳು ಒಂಬತ್ತು ತಿಂಗಳ ಬಳಿಕ ಮತ್ತೆ ತೆರೆಯುತ್ತಿವೆ. ಕೇರಳದಲ್ಲಿ ಶಾಲೆಗಳು ಜನವರಿಯಲ್ಲಿ ಪುನರಾರಂಭಗೊಳ್ಳುವ ಸೂಚನೆಗಳಿವೆ. ಶಾಲೆ ತೆರೆಯುವ ಕುರಿತು ನಿರ್ಧರಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉನ್ನತ ಮಟ್ಟದ ಸಭೆ 17 ರಂದು ಕರೆದಿರುವುದಾಗಿ ತಿಳಿದುಬಂದಿದೆ. ಶಿಕ್ಷಣ ಸಚಿವ ಸಿ ರವೀಂದ್ರನಾಥ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ತರಗತಿಗಳಿಗೆ ಶಾಲೆಗಳು ಆರಂಭ ಸಾಧ್ಯತೆ:
ಶಿಕ್ಷಣ ವಿಭಾಗದ ಮೂಲಗಳ ಪ್ರಕಾರ ಅಂತಿಮ ಪರೀಕ್ಷೆಗಳಿಗೆ ತಯಾರಿ ನಡೆಸಲು 10 ಮತ್ತು 12 ನೇ ತರಗತಿಗಳು ಜನವರಿ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಒಂಭತ್ತು ಮತ್ತು ಹನ್ನೊಂದನೇ ತರಗತಿಗಳನ್ನು ಆರಂಭಿಸುವ ನಿರ್ಧಾರವನ್ನು ಇನ್ನಷ್ಟೇ ತೆಗೆದುಕೊಳ್ಳಲಾಗುವುದು. ಹತ್ತನೇ ಮತ್ತು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳು ಸಾಮಾನ್ಯ ಪರೀಕ್ಷೆಗೆ ಸಿದ್ಧರಾಗಬೇಕಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹತ್ತನೇ ತರಗತಿಯ ಕೆಳಗಿನ ತರಗತಿಗಳಲ್ಲಿ ವಾರ್ಷಿಕ ಪರೀಕ್ಷೆಯನ್ನು ನಡೆಸದಿರಲು ಇಲ್ಲಿಯವರೆಗೆ ನಿರ್ಧರಿಸಲಾಗಿದೆ. ಕೋವಿಡ್ ಮಾನದಂಡಗಳನ್ನು ಅನುಸರಿಸಿ, ಮುಂದಿನ ತರಗತಿಗಳನ್ನು ಪ್ರಾರಂಭಿಸುವಲ್ಲಿ ಪ್ರಾಯೋಗಿಕ ತೊಂದರೆಗಳಿವೆ. ಹಾಲಿ ಶೈಕ್ಷಣಿಕ ವರ್ಷದಲ್ಲಿ ತರಗತಿಗಳನ್ನು ಸಂಪೂರ್ಣವಾಗಿ ವಿನಾಯ್ತಿ ನೀಡುವುದು ಮತ್ತು ಪರೀಕ್ಷೆಗಳನ್ನು ನಡೆಸದಿರುವ ನಿರ್ಧಾರದ ವ್ಯಾಪಕ ಬಾಧಕತೆಯ ಬಗ್ಗೆ ಒಂದು ವಿಭಾಗ ಈಗಾಗಲೇ ತೀರ್ವ ಕಳವಳ ವ್ಯಕ್ತಪಡಿಸಿದೆ.
17 ರಂದು ಸಭೆ:
ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಶಾಲೆಗಳನ್ನು ತೆರೆಯಲಾಗುವುದು. 17 ನೇ ದಿನಾಂಕದಂದು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿ ಎ. ಶಾಜಹಾನ್ ತಿಳಿಸಿದ್ದಾರೆ. ಪ್ರಸ್ತುತ ಹತ್ತು ಹಾಗೂ ಹನ್ನೆರಡನೇ ತರಗತಿಗಳ ಪುನರಾರಂಭ ಜನವರಿಯಲ್ಲಿ ನಡೆಯಲಿದೆ ಎಂದರು. ಶಾಲೆಯನ್ನು ಮತ್ತೆ ತೆರೆಯಬೇಕೆ ಎಂಬ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರ್ಕಾರ ವಿವಿಧ ನಿರ್ವಹಣೆಯ ಅಭಿಪ್ರಾಯಗಳನ್ನು ತಜ್ಞರಿಂದ ಕ್ರೋಢೀಕರಿಸಿದೆ.
10 ನೇ ತರಗತಿಯಲ್ಲಿ ಈ ಬಾರಿ ಒಟ್ಟು 4.95 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಹನ್ನೆರಡನೇ ತರಗತಿಯಲ್ಲಿ 3.65 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ಆನ್‌ಲೈನ್ ತರಗತಿಗಳು ಈಗ ಸಕ್ರಿಯವಾಗಿವೆ. 10 ಮತ್ತು 12 ನೇ ತರಗತಿಗಳನ್ನು ತೆಗೆದುಕೊಳ್ಳುವ ಶಿಕ್ಷಕರು ಡಿಸೆಂಬರ್ 17 ರಿಂದ ಶಾಲೆಗೆ ಬರಲು ಸೂಚಿಸಲಾಗಿದೆ. ಶಿಕ್ಷಕರು ದಿನಕ್ಕೆ ಶೇಕಡಾ 50 ಪ್ರಮಾಣದಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ.