ಹೊಸದಿಲ್ಲಿ: ರಾಜಧಾನಿಯ ಗಡಿ ಪ್ರದೇಶಗಳಲ್ಲಿ ವಿವಿಧ ರಾಜ್ಯಗಳ ರೈತರು ಕೇಂದ್ರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳಿಗೆ ಚ್ಯುತಿ ಬರುವ ರೀತಿಯಲ್ಲಿ ಕೆಲ ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳ ಕುರಿತಂತೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತನ್ನ ಕಳವಳ ವ್ಯಕ್ತಪಡಿಸಿದೆ.
``ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಯಾವುದೇ ಆಧಾರ ಅಥವಾ ಸಾಕ್ಷ್ಯಗಳಿಲ್ಲದೆ ಖಲಿಸ್ತಾನಿಗಳು ಹಾಗೂ ದೇಶವಿರೋಧಿಗಳು ಎಂಬ ಹಣೆಪಟ್ಟಿಯನ್ನು ಕಟ್ಟುವ ಕೆಲಸವನ್ನು ಕೆಲ ಮಾಧ್ಯಮಗಳು ಮಾಡುತ್ತಿವೆ,' ಎಂದು ಎಡಿಟರ್ಸ್ ಗಿಲ್ಡ್ ತನ್ನ ಹೇಳಿಕೆಯನ್ನು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದೆ.
``ಇಂತಹ ವರದಿಗಾರಿಕೆ ಜವಾಬ್ದಾರಿಯುತ ಹಾಗೂ ನೈತಿಕ ಪತ್ರಿಕೋದ್ಯಮದ ಮೌಲ್ಯಗಳ ವಿರುದ್ಧವಾಗಿದೆ,'' ಎಂದು ಹೇಳಿದ ಎಡಿಟರ್ಸ್ ಗಿಲ್ಡ್, ಪ್ರತಿಭಟನೆಗಳ ಕುರಿತಂತೆ ಸಮತೋಲಿತ ಹಾಗೂ ನ್ಯಾಯೋಚಿತ ವರದಿಗಾರಿಕೆ ನಡೆಸುವಂತೆ ಸಲಹೆ ನೀಡಿದೆ.