ಕಾಸರಗೋಡು: ಕೋವಿಡ್ ಸಾಂಕ್ರಾಮಿಕ ರೋಗ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಕುಸಿತದ ಹಾದಿಯಲ್ಲಿದ್ದು ಇದರ ಜೊತೆಗೆ ಎರಡನೇ ತರಂಗದ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಕಾಸರಗೋಡಿನಲ್ಲಿ ನಿಬಂಧನೆಗಳನ್ನು ಬಿಗಿಗೊಳಿಸಲಾಗುತ್ತಿದೆ. ಸೋಂಕಿತ ಜನರ ಸಂಖ್ಯೆ ಕ್ಷೀಣಿಸುತ್ತಿರುವ ಮಧ್ಯೆ ನಗರಗಳು ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಸಾರ್ವಜನಿಕರು ಕಿಕ್ಕಿರಿದು ತುಂಬಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಕೆಎಸ್ ಆರ್ ಟಿ ಸಿ ಬಸ್ಸುಗಳು ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಜನರು ಯಾವುದೇ ಮುಂಜಾಗ್ರತೆಗಳಿಲ್ಲದೆ ಸಂಚರಿಸುತ್ತಿರುವುದು ಸಾಮಾನ್ಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮಾಸ್ಕ್ ಧರಿಸದ ಪ್ರಯಾಣಿಕರನ್ನು ಕರೆದೊಯ್ದರೆ ಖಾಸಗಿ ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಕರೋನಾ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಾತನಾಡುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸರ್ಕಾರವು ನಿಗದಿಪಡಿಸಿದ ಪರಿಷ್ಕøತ ದಂಡವನ್ನು ವಿಧಿಸಲು ನಿರ್ಧರಿಸಲಾಯಿತು. ಕೋವಿಡ್ ನಿಯಮಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವಾಹನ ಚಲಾಯಿಸುವಾಗ ವ್ಯಾಪಕವಾಗಿ ಕಾನೂನು ಉಲ್ಲಂಘಿಸಲಾಗುತ್ತಿದೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ರಾತ್ರಿ 9 ರ ಬಳಿಕ ಹೋಟೆಲ್‍ಗಳು ತೆರೆದಿರಬಾರದು:
ರಾತ್ರಿ 9 ಗಂಟೆಯ ನಂತರ ಹೋಟೆಲ್‍ಗಳು ಮತ್ತು ಮಳಿಗೆಗಳು ಮುಚ್ಚಿರಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಅಂಗಡಿಯನ್ನು ಮುಚ್ಚಿರದಿದ್ದರೆ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಾಞಂಗಾಡ್ ಮತ್ತು ಕಾಸರಗೋಡು ಡಿವೈಎಸ್‍ಪಿಗಳಿಗೆ ಸಭೆ ನಿರ್ದೇಶನ ನೀಡಿತು. ಡಿಸೆಂಬರ್ ಎರಡನೇ ವಾರದ ನಂತರ ರಾಜ್ಯದಲ್ಲಿ ಕೋವಿಡ್‍ನ ಎರಡನೇ ತರಂಗ ಸಂಭವಿಸುವ ಬಗ್ಗೆ ರಾಜ್ಯ ಸರ್ಕಾರ ಎಚ್ಚರಿಸಿದೆ.
ಸೋಂಕಿನ ಎರಡನೇ ತರಂಗಕ್ಕೆ ಹೋಟೆಲ್‍ಗಳು ಮುಖ್ಯ ಮೂಲವಾಗುತ್ತವೆ ಎಂದು ತಜ್ಞರು ಅಂದಾಜಿಸಿದ್ದಾರೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಪೋಲೀಸರೊಂದಿಗೆ ಜವಾಬ್ದಾರಿ ಹೊಂದಿರುವ ಇತರ ಅಧಿಕಾರಿಗಳು, ತಹಶೀಲ್ದಾರ್ ಗಳು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಸಮವಸ್ತ್ರದಲ್ಲಿರುವ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳಬಹುದು. ಮ್ಯಾಶ್ ಯೋಜನೆಯಲ್ಲಿ ಶಿಕ್ಷಕರು ಕೂಡಾ ಪರಿಶೀಲನೆ ಜವಾಬ್ದಾರಿ ನಿರ್ವಹಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
ಮದುವೆ ಮತ್ತು ಸಮಾರಂಭಗಳಿಗೆ ಪೂರ್ವ ಅನುಮತಿ:
ಮದುವೆ ಮತ್ತು ಇತರ ಕಾರ್ಯಗಳಿಗೆ ಆಯಾ ಸ್ಥಳೀಯ ಸಂಸ್ಥೆಯಿಂದ ಪೂರ್ವ ಅನುಮತಿ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮದುವೆ ಸೇರಿದಂತೆ ಸಮಾರಂಭಗಳಲ್ಲಿ ಭಾಗವಹಿಸಲು ಗರಿಷ್ಠ 50 ಜನರಿಗೆ ಮಾತ್ರ ಅವಕಾಶವಿದೆ. ಕೆಲವು ಸ್ಥಳಗಳಲ್ಲಿ, ಸಮಾರಂಭದಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂಬ ದೂರುಗಳು ಬಂದಿರುವುದನ್ನು ಪರಿಶೀಲಿಸಲಾಗುತ್ತಿದೆ.
ಚುನಾವಣಾ ಪ್ರಚಾರದಲ್ಲೂ ಕೋವಿಡ್ ಜಾಗೃತಿ ಅನುಸರಣೆ:
ಮನೆ-ಮನೆಗೆ ಚುನಾವಣಾ ಪ್ರಚಾರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರದ ನಡುವೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಈ ನಿಯಮ ಪಾಲಿಸಲು ವಿಫಲರಾದವರ ಮೇಲೆ ಕೇರಳ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಸಿಆರ್‍ಪಿಸಿ 144 ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ, ವಲಯ ಮ್ಯಾಜಿಸ್ಟ್ರೇಟ್‍ಗಳನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ಕೋವಿಡ್ ರೋಗ ಹರಡುವ ಅಪಾಯವಿರುವುದರಿಂದ ಅಂತರರಾಜ್ಯ ಬಸ್ ಸೇವೆಯನ್ನು ಪುನರಾರಂಭಿಸಲಾಗಿದೆ ಎಂದು ಸಭೆ ನಿರ್ಧರಿಸಿದೆ.