ಕಣ್ಣೂರು: ಬಟ್ಟೆ ಒಗೆಯುತ್ತಿದ್ದಾಗ ಹಠಾತ್ ಬಾವಿಗೆ ಬಿದ್ದ ಗೃಹಿಣಿ ಮುಂದಿನ ಮನೆಯ ಬಾವಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕಣ್ಣೂರಿನ ಇರಿಕೂರ್‍ನಲ್ಲಿ ಈ ಘಟನೆ ನಡೆದಿದೆ. ಇರಿಕೂರ್ ಆಯಿಪುಳದಲ್ಲಿ ಬಟ್ಟೆ ಒಗೆಯುತ್ತಿದ್ದ ಗೃಹಿಣಿ ಬಾವಿಗೆ ಜಾರಿ ಬಿದ್ದರು. ಆದರೆ ತಕ್ಷಣ ನಡೆಸಿದ ಹುಡುಕಾಟದಲ್ಲಿ ಅವರನ್ನು ಬಾವಿಯಲ್ಲಿ ಪತ್ತೆಹಚ್ಚಲಾಗದೆ ಕಳವಳಕ್ಕೆ ಕಾರಣವಾಯಿತು. ಅಷ್ಟರಲ್ಲಿ ಹತ್ತಿರದ ಮನೆಯ ಬಾವಿಯಲ್ಲಿ ಅವರು ಪತ್ತೆಯಾಗಿ ಆಶ್ಚರ್ಯ ಮೂಡಿಸಿದರು.
ಅವರು 25 ಅಡಿ ಆಳದಲ್ಲಿದ್ದ ಬಾವಿಯ ತಳವನ್ನು ತಲುಪಿದ್ದರು, ಆದರೆ ಅದ್ಭುತವಾಗಿ ತಪ್ಪಿಸಿಕೊಂಡರು. ಆಯಿಪುಳ ಸರ್ಕಾರಿ ಯುಪಿ ಶಾಲೆಯ ಬಳಿ ಕೆ.ಎ. ಅಯೂಬ್ ಅವರ ಪತ್ನಿ ಉಮೈಬಾ (42) ಬಾವಿಗೆ ಬಿದ್ದು ಪವಾಡ ಸದೃಶ ಪಾರಾದ ಗೃಹಿಣಿ. ಗುರುವಾರ ಮಧ್ಯಾಹ್ನ 12 ಗಂಟೆಗೆ ಈ ಘಟನೆ ನಡೆದಿದೆ.
ವಿಶೇಷವೆಂದರೆ ಅವರು ಬಿದ್ದ ಬಾವಿಯಿಂದ ಭೂಗತ ಗುಹೆಯೊಂದು ಹತ್ತಿರದ ಬಾವಿಗೆ ಸಂಪರ್ಕ ಹೊಂದಿತ್ತು. ಬಾವಿಯಲ್ಲಿ ಏನೋ ಜೋರಾಗಿ ಬೀಳುವುದನ್ನು ಕೇಳಿದ ಕುಟುಂಬವು ತಕ್ಷಣ ಅಲ್ಲಿಗೆ ತಲಪಿತ್ತು. ಪೋಲೀಸರು ಮತ್ತು ಅಗ್ನಿಶಾಮಕ ದಳದವರು ತಲಪುವಷ್ಟರಲ್ಲಿ ಗೃಹಿಣಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಗೃಹಿಣಿ ಚಿಕಿತ್ಸೆಗಾಗಿ ಕಣ್ಣೂರು ಎಕೆಜಿ ಆಸ್ಪತ್ರೆಗೆ ಸಾಗಿಸಲಾಯಿತು.