ಕಾಸರಗೋಡು: ಇಟೆಲಿ, ಯು.ಕೆ. ಸಹಿತ ಯೂರೋಪ್ಯನ್ ರಾಷ್ಟ್ರ ಗಳಿಂದ ಬಂದವರು ರೂಂ ಕ್ವಾರೆಂಟೈನ್ ಪ್ರವೇಶಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕೋವಿಡ್ 19 ಸೋಂಕು ಹೊಸರೂಪು ಪಡೆದು ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ರೋಗಲಕ್ಷಣ ಹೊಂದಿರುವವರು ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಭೇಟಿ ಮಾಡಬೇಕು ಎಂದವರು ನುಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಐ.ಇ.ಸಿ. ಸಂಚಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ವಾರ್ಡ್ ಮಟ್ಟದ ಜನಜಾಗೃತಿ ಸಮಿತಿಗಳ ಸಭೆ ತುರ್ತು ನಡೆಸಿ ಚಟುವಟಿಕೆ ಚುರುಕುಗೊಳಿಸಬೇಕು ಎಂದವರು ಆದೇಶ ನೀಡಿದರು. ವಿವಾಹ ಸಹಿತ ಸಮಾರಂಭಗಳು, ಉತ್ಸವಗಳು ಇತ್ಯಾದಿಗಳನ್ನು ನಡೆಸುವ ಮುನ್ನ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನೋಂದಣಿ ನಡೆಸಬೇಕು. ಕ್ರಿಸ್ಮಸ್, ಹೊಸವರ್ಷಾಚರಣೆ ಸಮಾರಂಭಗಳಲ್ಲಿ ಗರಿಷ್ಠ 100 ಮಂದಿ ಮಾತ್ರ ಭಾಗವಹಿಸಬಹುದಾಗಿದ್ದು, ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕ್ರೀಡಾ ಪಂದ್ಯಾಟಗಳನ್ನು ನಡೆಸಲು ಅನುಮತಿಯಿಲ್ಲ ಎಂದವರು ನುಡಿದರು.
ಕೋವಿಡ್ ನಿಯಂತ್ರಣ ನಡೆಸುವಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿರುವ ಮಾಸ್ಟರ್ ಯೋಜನೆಯನ್ನು ನಿಲುಗಡೆ ಮಾಡುವುದಿಲ್ಲ ಎಂದು ಜಿಲ್ಲಧಿಕಾರಿ ಸ್ಪಷ್ಟಪಡಿಸಿದರು. ಈ ವರೆಗೆ ಈ ಯೋಜನೆ ಪ್ರಕಾರ ಕರ್ತವ್ಯ ಸಲ್ಲಿಸಿದ್ದವರು, ಆಸಕ್ತಿಯಿದ್ದರೆ ಮುಂದುವರಿಯಬಹುದು. ಅಲ್ಲದವರ ಬದಲಿಗೆ ಬೇರೆಯವರ ನೇಮಕ ನಡೆಯಲಿದೆ. ಹಳೆಯ ತಂಡವನ್ನು ಪೂರ್ಣ ಪ್ರಮಾಣದಲ್ಲಿ ಬದಲಿಸುವುದು ಸಾಧ್ಯವಿಲ್ಲ. ಜಿಲ್ಲೆಯ ಬೀಚ್ ಗಳಲ್ಲಿ ಜನನಿಬಿಢತೆ ಸಲ್ಲದು ಎಂದವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಧೂಸೂದನನ್ ಎಂ., ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಮಾಸ್ ಮಿಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಜಿಲ್ಲಾ ಸಂಚಾಲಕ ದಿಲೀಪ್ ಕುಮಾರ್, ಮಾಸ್ಟರ್ ಯೋಜನೆ ಸಂಚಾಲಕಿ ವಿದ್ಯಾ ಪಿ.ಸಿ., ಕೆ.ಎಸ್.ಎಸ್.ಎಂ. ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್ ಮೊದಲಾದವರು ಉಪಸ್ಥಿತರಿದ್ದರು.