ಮಂಜೇಶ್ವರ/ ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಎಲ್ಲೆಡೆ ಬಿರುಸಿನ ಮತದಾನ ನಡೆಯಿತು.
ಎಲೆಕ್ಟ್ರಾನಿಕ್ ಮತದಾನ ಯಂತ್ರದ ಗುಂಡಿಯನ್ನು ಒತ್ತುವ ಗೊಂದಲದಿಂದ ಮತದಾನ ಕೇಂದ್ರಗಳಲ್ಲಿನ ಅನೇಕ ಮತದಾರರು ಸಂಕಷ್ಟಕ್ಕೊಳಗಾಗಿರುವುದು ಕಂಡುಬಂದಿದೆ. ಈ ಹಿಂದಿನ ಚುನಾವಣೆಗಳಲ್ಲಿ ಇದ್ದಂತೆ ಈ ಬಾರಿ ಮತದಾರರಿಗೆ ಮತದಾನ ಯಂತ್ರವನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಯಾರೂ ಮಾರ್ಗದರ್ಶನ ನೀಡಿಲ್ಲ. ಗ್ರಾಮ ಪಂಚಾಯತಿ ಅಭ್ಯರ್ಥಿ, ಬ್ಲಾಕ್ ಪಂಚಾಯತಿ ಅಭ್ಯರ್ಥಿ ಮತ್ತು ಜಿಲ್ಲಾ ಪಂಚಾಯತಿ ಅಭ್ಯರ್ಥಿಯ ಕ್ರಮದಲ್ಲಿ ಮೊದಲು ಮತದಾನ ಯಂತ್ರದಲ್ಲಿ ಗುಂಡಿಯನ್ನು ಒತ್ತಬೇಕಾಗುತ್ತದೆ. ಮತದಾನ ಯಂತ್ರವನ್ನು ಅದಕ್ಕೆ ತಕ್ಕಂತೆ ಸರಿಹೊಂದಿಸಲಾಗಿದ್ದರೂ, ಅನೇಕ ಮತದಾರರು ಗುಂಡಿಯನ್ನು ಹೇಗೆ ಒತ್ತುವುದು ಎಂದು ತಿಳಿಯದೆ ಆತಂಕದಲ್ಲಿದ್ದರು. ಕೆಲವರು ಮೊದಲು ಜಿಲ್ಲಾ ಪಂಚಾಯತಿ ಅಭ್ಯರ್ಥಿಗೆ ಗುಂಡಿಯನ್ನು ಒತ್ತಿದರು. ಇತರರು ಮೊದಲು ಗ್ರಾಮ ಪಂಚಾಯತಿ ಅಭ್ಯರ್ಥಿಗೆ ಗುಂಡಿಯನ್ನು ಒತ್ತಿ ನಂತರ ಅವರು ಮತ ಚಲಾಯಿಸಿದ್ದಾರೆಂದು ಸೂಚಿಸಲು ಧ್ವನಿಗಾಗಿ ಕಾಯುತ್ತಿದ್ದರು. ಎಲ್ಲಾ ಮೂರು ಗುಂಡಿಗಳನ್ನು ಒತ್ತಿದ ನಂತರವೇ ಶಬ್ದ ಬರುವ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಮತದಾರರ ಗೊಂದಲಕ್ಕೆ ಕಾರಣವಾಯಿತು.
ಮತ ಚಲಾಯಿಸುವುದು ಹೇಗೆ, ಗುಂಡಿಯನ್ನು ಹೇಗೆ ಒತ್ತುವುದು ಎಂಬ ಸ್ಪಷ್ಟ ಕಲ್ಪನೆ ಇಲ್ಲದ ಮತದಾರರಿಗೆ ಹೇಳಲು ಚುನಾವಣಾ ಅಧಿಕಾರಿಗಳು ಮತ್ತು ಬೂತ್ ಏಜೆಂಟರು ಶ್ರಮಿಸಬೇಕಾಯಿತು. ಅನೇಕ ಬೂತ್‍ಗಳಲ್ಲಿ ಮತ ಚಲಾಯಿಸುವುದು ಹೇಗೆ ಎಂಬ ವಿವರಣೆಯನ್ನು ಅರ್ಥಮಾಡಿಸಿ ಕೊಡಲು ಮತದಾರರನ್ನು ಮನವೊಲಿಸಲು ಹೆಚ್ಚು ಸಮಯ ತೆಗೆದುಕೊಳ್ಳಬೇಕಾಯಿತೆಂದು ಮತಗಟ್ಟೆಯ ಅಧಿಕಾರಿಯೊಬ್ಬರು ಅವಲತ್ತುಕೊಂಡಿರುವರು. ಜೊತೆಗೆ ಮತದಾರನ ಹತ್ತಿರಕ್ಕೆ ತೆರಳಿ ತಿಳಿಸಿಕೊಡುವುದು ಗೌಪ್ಯತೆಯ ದೃಷ್ಟಿಯಿಂದ ನಿಷೇಧಿತವಾಗಿದೆ. ಆದ್ದರಿಂದ ಗಟ್ಟಿಯಾಗಿ ಕರೆದು ಮೊದಲು ಇಂತಿಂತ ಬಟನ್ ಒತ್ತಿರೆಂದು ತಿಳಿಸಿಕೊಡಬೇಕಾದ ಸ್ಥಿತಿ ಗೊಂದಲಕ್ಕೆ ಕಾರಣವಾಯಿತು ಎಂದು ತಿಳಿದು ಬಂದಿದೆ.
ಕೋವಿಡ್ ಜಾಗರೂಕತೆಯ ಭಾಗವಾಗಿ, ಮತ ಯಂತ್ರದ ಮೇಲಿನ ಗುಂಡಿಯನ್ನು ಕೈ ಬಳಸಿ ಮುಟ್ಟಬಾರದೆಂದೂ ಪೆನ್ನಿನಿಂದ ಮಾತ್ರ ಮುಟ್ಟಬೇಕೆಂದು ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆಗಳು ವ್ಯಕ್ತವಾಗುತ್ತಿದ್ದವು. ಆದರೆ ಆ ಬಳಿಕ ಪೆನ್ನಿನಿಂದ ಒತ್ತುವುದರಿಂದ ಮತ ಯಂತ್ರಗಳಿಗೆ ಹಾನಿಯಾಗುತ್ತದೆ ಮತ್ತು ಹಾಗೆ ಮಾಡಬಾರದೆಂದು ಕಳೆದ ಎರಡು-ಮೂರು ದಿನಗಳಿಂದ ಪತ್ರಿಕೆ ಸಹಿತ ಸಮೂಹ ಮಾಧ್ಯಮಗಳಲ್ಲಿ ಪ್ರಕಟಣೆಗಳೂ ಬಿತ್ತರಗೊಂಡಿದ್ದವು. ಇಂತಹ ಎರಡೆರಡು ಮಾಹಿತಿಗಳಿಂದ ಗೊಂದಲಕ್ಕೊಳಗಾದ ಮತದಾರರು ಹಲವೆಡೆ ಬಹುತೇಕ ಮಂದಿ ಪೆನ್ ಬಳಸಿ ಮತಯಂತ್ರದಲ್ಲಿ ಬಟನ್ ಮೂಲಕ ಮತಚಲಾಯಿಸಿದವರೇ ಹೆಚ್ಚಿರುವುದು ಮತ ಚಲಾವಣೆಯ ಸಿಂಧುತ್ವದ ಪ್ರಶ್ನೆಯಾಗಿ ಉಳಿದಿದೆ.