ಹೈದರಾಬಾದ್: ರೂಪಾಂತರಿ ಕೊರೋನಾ ವೈರಸ್ ವಿರುದ್ಧವೂ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಹೇಳಿದೆ.
ವಿಶ್ವಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ರೂಪಾಂತರಿ ಕೊರೋನಾ ವೈರಸ್ ವಿರುದ್ಧವೂ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಖ್ಯಾತ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಹೇಳಿದೆ. ಈ ಕುರಿತಂತೆ ಮಾತನಾಡಿರುವ ಭಾರತ್ ಬಯೋಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಎಲ್ಲಾ ಅವರು, 'ರೂಪಾಂತರಗೊಂಡಿರುವ ಕೊರೊನಾ ವೈರಸ್‌ನಿಂದಾಗುವ ಸೋಂಕಿನ ವಿರುದ್ಧವೂ ಕೋವ್ಯಾಕ್ಸಿನ್ ರಕ್ಷಣೆ ಒದಗಿಸಲಿದೆ. ಈಗಷ್ಟೇ ಅಲ್ಲ.. ಕೊರೊನಾ ವೈರಸ್ ಇನ್ನೂ ಹಲವು ಬಾರಿ ರೂಪಾಂತರಗೊಳ್ಳಲಿದೆ. ಎಷ್ಟೇ ಸ್ವರೂಪಗಳನ್ನು ಪಡೆದರೂ ಈ ವೈರಸ್ ವಿರುದ್ಧ ಕೋವ್ಯಾಕ್ಸಿನ್ ರಕ್ಷಣೆ ಒದಗಿಸಲಿದೆ ಎಂದು ಹೇಳಿದರು.
ಕೊರೋನಾ ವೈರಸ್ ರೂಪಾಂತರವು ಅನಿರೀಕ್ಷಿತವೇನಲ್ಲ. ಕೊರೋನಾ ವೈರಸ್ ಹೆಚ್ಚೆಚ್ಚು ಮಂದಿಗೆ ಸೋಕಿದಂತೆಲ್ಲಾ ಆ ಮಾರ್ಗದಲ್ಲಿ ರೂಪಾಂತರಗೊಳ್ಳುತ್ತದೆ. ಏಕೆಂದರೆ ಅದು ನಿರ್ಜೀವ ಜೀವಿ. ಹೀಗಾಗಿ ರೂಪಾಂತರ ಸಾಮಾನ್ಯ ಎಂದು ಕೃಷ್ಣಾ ಹೇಳಿದ್ದಾರೆ.
ಬ್ರಿಟನ್ ನಿಂದ ಭಾರತಕ್ಕೆ ಮರಳಿದ ಪ್ರಯಾಣಿಕರ ಪೈಕಿ ಆರು ಜನರಲ್ಲಿ ಈ ನೂತನ ರೂಪಾಂತರಿ ಕೊರೋನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಭಾರತ ಮಾತ್ರವಲ್ಲದೇ ಈಗಾಗಲೇ ಡೆನ್ಮಾರ್ಕ್, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರಗಳಲ್ಲೂ ರೂಪಾಂತರಿ ಕೊರೋನಾ ಸೊಂಕು ಪ್ರಕರಣಗಳು ವರದಿಯಾಗುತ್ತಿವೆ. ಇದೇ ಕಾರಣಕ್ಕೆ ವಿಶ್ವಾದ್ಯಂತ ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಬ್ರಿಟನ್ ಗೆ ಎಲ್ಲ ರೀತಿಯ ವಿಮಾನ ಸೇವೆ ಬಂದ್ ಮಾಡಲಾಗಿದೆ.