ಕೊಲ್ಲಂ: ಬ್ಲಾಕ್ ಪಂಚಾಯತಿ ಕಚೇರಿಯಲ್ಲಿ ಸ್ವೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಈಗ ಅದೇ ಬ್ಲಾಕ್ ಪಂಚಾಯತಿಯ ಆಡಳಿತ ಚುಕ್ಕಾಣಿ ಹಿಡಿದಿರುವುದು ವಿಶಿಷ್ಟವಾಗಿ ಗುರುತಿಸಲ್ಪಟ್ಟು ಪ್ರಜಾಪ್ರಭುತ್ವದ ಹಿರಿಮೆ ಎತ್ತಿಹಿಡಿದಿದೆ. ಕೊಲ್ಲಂ ತಲವೂರ್ ಬ್ಲಾಕ್ ವಿಭಾಗದ ಸದಸ್ಯೆ ಆನಂದವಳ್ಳಿ ಅವರು ಪತ್ತನಪುರಂ ಬ್ಲಾಕ್ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಳವೂರ್ ಎನ್ಜರಕಟ್ಟೆ ಶ್ರೀನಿಲಂ ಹೌಸ್‍ನ ಆನಂದವಳ್ಳಿಯವರಿಗಿದು ಅನಿರೀಕ್ಷಿತ ಸಂತಸ ನೀಡಿದ ವಿಷಯವಾಗಿ ಗಮನ ಸೆಳೆಯಿತು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇವರು ಸ್ವಚ್ಚಗೊಳಿಸುವ ಕೆಲಸದಿಂದ ಹಿಡಿದು ಅಧ್ಯಕ್ಷ ಸ್ಥಾನದವರೆಗೆ ಪತ್ತನಪುರಂಗೆ ಹೆಮ್ಮೆಯ ಕ್ಷಣವಾಗಿದೆ.
ಆನಂದವಳ್ಳಿ ಈಗ ಪತ್ತನಪುರಂ ಬ್ಲಾಕ್ ಪಂಚಾಯತಿ ಅಧ್ಯಕ್ಷೆಯಾಗಿದ್ದಾರೆ. ಆನಂದವಳ್ಳಿ ಕಳೆದ ಹತ್ತು ವರ್ಷಗಳಿಂದ ಅದೇ ಬ್ಲಾಕ್ ಪಂಚಾಯಿತಿಯಲ್ಲಿ ತಾತ್ಕಾಲಿಕ ಕ್ಲೀನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ತಳವೂರ್ ವಿಭಾಗದಿಂದ ಗೆದ್ದ ಆನಂದವಳ್ಳಿಯನ್ನು ಬ್ಲಾಕ್ ಪಂಚಾಯತಿ ಅಧ್ಯಕ್ಷರನ್ನಾಗಿ ಮಾಡಲು ಸಿಪಿಐ(ಎಂ) ನಿರ್ಧರಿಸಿ ಕ್ರಮಕ್ಕೆ ಮುಂದಾಯಿತು. ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ ಪತಿ ಮೋಹನನ್ ಪೈಂಟಿಂಗ್ ಕಾರ್ಮಿಕರಾಗಿದ್ದಾರೆ. ಆನಂದವಲ್ಲಿ ಅವರು ಪರಿಶಿಷ್ಟ ಜಾತಿ ಸಾಮಾನ್ಯ ಸ್ಥಾನದಲ್ಲಿ ಸ್ಪರ್ಧಿಸಿ 654 ಮತಗಳ ಬಹುಮತದೊಂದಿಗೆ ಜಯಗಳಿಸಿದರು. ಬ್ಲಾಕ್ ಪಂಚಾಯತಿಯಲ್ಲಿ ಕ್ಲೀನರ್ ಆಗಿರುವ ವ್ಯಕ್ತಿಯೊಬ್ಬರು ಅದೇ ಬ್ಲಾಕ್ ಪಂಚಾಯತಿಯಲ್ಲೇ ಅಧ್ಯಕ್ಷರಾಗುವುದು ಭಾರತದಲ್ಲಿ ಅಪೂರ್ವ.