ನವದೆಹಲಿ: ನಮ್ಮ ರಾಷ್ಟ್ರಗೀತೆ ಜನ ಗಣ ಮನ ವನ್ನು ಬದಲಾಯಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಸ್ತುತ ಇರುವ ರಾಷ್ಟ್ರಗೀತೆಯನ್ನು ಬದಲಾಯಿಸಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಬರೆದಿರುವ ಪತ್ರ ತೀವ್ರ ಚರ್ಚೆಯ ವಿಷಯವಾಗಿದೆ.
ರಾಷ್ಟ್ರಗೀತೆಯಲ್ಲಿ ಕೆಲ ಅನಗತ್ಯ ಪದಗಳು ಸೇರಿಕೊಂಡಿವೆ.... ಗೀತೆಯಲ್ಲಿರುವ ಕೆಲವು ಪದಗಳಿಗೆ ಸಂಬಂಧಿಸಿದ ಪ್ರದೇಶಗಳು ಪಾಕಿಸ್ತಾನದಲ್ಲಿರುವುದರಿಂದ ಆ ಅನಗತ್ಯ ಪದಗಳನ್ನು ರಾಷ್ಟ್ರಗೀತೆಯಿಂದ ತೆಗೆದುಹಾಕುವಂತೆ ಕೋರಿ ಸುಬ್ರಮಣ್ಯಸ್ವಾಮಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಜನಗಣಮನ ಗೀತೆ ಹಾಡಿದಾಗ ಯಾರನ್ನೂ ಪ್ರಶಂಸಿಸಿ ಬರೆಯಲಾಗಿದೆ ಎಂಬ ಅನುಮಾನವನ್ನು ಡಾ. ಸ್ವಾಮಿ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ಆ ಸ್ಥಾನದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಇಂಡಿಯನ್ ನ್ಯಾಷನಲ್ ಆರ್ಮಿ 1943ರ ಅಕ್ಟೋಬರ್ 21 ರಂದು ಇಂಫಾಲ್ ಅನ್ನು ವಶಪಡಿಸಿಕೊಂಡಾಗ ಹಾಡಿದ ಗೀತೆಯನ್ನು ಜಾರಿಗೊಳಿಸಬೇಕೆಂದು ಪತ್ರದಲ್ಲಿ ಹೇಳಿದ್ದಾರೆ.ರಾಷ್ಟ್ರಗೀತೆ 'ಜನಗಣಮನ' ದಲ್ಲಿ ನಾವು ಹಾಡುವ ಸಿಂಧು ಎಂಬ ಪ್ರದೇಶ ಈಗ ಪಾಕಿಸ್ತಾನದ ಭಾಗವಾಗಿರುವ ಕಾರಣ ಅದನ್ನು ನಾವು ಹೊಗಳುವ ಅಗತ್ಯವಿಲ್ಲ. ಆ ಪದ ತೆಗೆದು ಈಶಾನ್ಯ ಎಂಬ ಪದವನ್ನು ಸೇರಿಸಬೇಕು ಎಂದು 2019 ರಲ್ಲಿ ಕಾಂಗ್ರೆಸ್ ಸಂಸದ ರಿಪುನ್ ಬೋರಾ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯರ ವಿಧೇಯಕ ಮಂಡಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.ಭವಿಷ್ಯದಲ್ಲಿ 'ಜನಗನಮಣ' ಗೀತೆಯಲ್ಲಿರುವ ಅನಗತ್ಯ ಪದಗಳನ್ನು ತೆಗೆದು, ಅಗತ್ಯವಾಗಿರುವ ಪದಗಳನ್ನು ಸೇರಿಸಿ ರಾಷ್ಟ್ರಗೀತೆಯನ್ನು ಪರಿಷ್ಕರಿಸುತ್ತೇವೆ ಎಂದು 1949ರ ನವೆಂಬರ್ 26 ರಂದು ಭಾರತ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರು ಹೇಳಿದ್ದ ವಿಷಯವನ್ನು ಪತ್ರದಲ್ಲಿ ಡಾ. ಸುಬ್ರಮಣ್ಯಸ್ವಾಮಿ ಸ್ಮರಿಸಿದ್ದಾರೆ.
ಹೊಸ ರಾಷ್ಟ್ರಗೀತೆಯನ್ನು ಮುಂಬರುವ ಗಣರಾಜ್ಯೋತ್ಸವದೊಳಗೆ ರೂಪಿಸಬೇಕೆಂದು ಡಾ.ಸ್ವಾಮಿ ಪತ್ರದಲ್ಲಿ ಸೂಚಿಸಿದ್ದಾರೆ. ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ರಚಿಸಿದ್ದ 'ಜನಗನಮಣ' ವನ್ನು 1911 ಡಿಸೆಂಬರ್ 27ರಂದು ಕೊಲ್ಕಾತ್ತಾದಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶದಲ್ಲಿ ಮೊದಲ ಬಾರಿಗೆ ಹಾಡಿದ್ದರು ಎಂದು ಸುಬ್ರಮಣ್ಯಯನ್ ಸ್ವಾಮಿ ಹೇಳಿದ್ದಾರೆ.
ಅದರಲ್ಲಿ 'ಭಾರತ್ ಭಾಗ್ಯ ವಿಧಾತ' ಪದದ ಬದಲಿಗೆ 1943 ರಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ 'ಶುಭ್ ಸುಖ್ ಚೈನ್' ಎಂಬ ಪದವನ್ನು ಸೇರಿಸಿ ಹಾಡಲಾಗಿತ್ತು. ಹೊಸ ರಾಷ್ಟ್ರಗೀತೆಯನ್ನು ಸುಭಾಷ್ ಚಂದ್ರ ಬೋಸ್ ರಚಿಸಿದ್ದರು, ಕ್ಯಾಪ್ಟನ್ ರಾಮ್‍ಸಿಂಗ್ ಸ್ವರ ಸಂಯೋಜಿಸಿದ್ದರು ಎಂದು ಸ್ವಾಮಿ ಪತ್ರದಲ್ಲಿ ಹೇಳಿದ್ದಾರೆ.
ರಾಷ್ಟ್ರಗೀತೆ ಬದಲಾಯಿಸಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿರುವುದು ಇದೇ ಮೊದಲೇನು ಅಲ್ಲ. ಕಾಂಗ್ರೆಸ್ ಸಂಸದ ರಿಪುನ್ ಬೋರಾ ಅವರು 2019ರಲ್ಲಿ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿ, 'ಈಶಾನ್ಯ ಭಾರತವನ್ನು ರಾಷ್ಟ್ರಗೀತೆಯಲ್ಲಿ ಉಲ್ಲೇಖಿಸಲಾಗಿಲ್ಲ .. ಆದರೆ, ಪ್ರಸ್ತುತ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರದೇಶ ರಾಷ್ಟ್ರಗೀತೆಯಲ್ಲಿ ಮುಂದುವರಿದಿದೆ. ಪಾಕಿಸ್ತಾನದಲ್ಲಿರುವ ಪ್ರದೇಶವನ್ನು ನಾವು ಕೊಂಡಾಡಬೇಕಾದ ಅಗತ್ಯವಿಲ್ಲ ಎಂದು ರಿಪುನ್ ಆ ಸಮಯದಲ್ಲಿ ಒತ್ತಾಯಿಸಿದ್ದರು. ಕೇಂದ್ರ ಸಚಿವ ಅರವಿಂದ ಸಾವಂತ್ ಕೂಡ 2016ರಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಿಂಧ್ ಪಾಕಿಸ್ತಾನದ ಭಾಗವಾಗಿದೆ. ಪಾಕಿಸ್ತಾನದೊಂದಿಗೆ ತಾವು ಯಾವುದೇ ಸಂಬಂಧ ಹೊಂದಿಲ್ಲ ಎಂದು ಭಾರತದಲ್ಲಿರುವ ಸಿಂಧಿ ಸಮುದಾಯ ಹೇಳಿದೆ ಎಂದು ತಿಳಿಸಿದ್ದರು.