ನವದೆಹಲಿ: ತೆರಿಗೆ ವಿವಾದಗಳನ್ನು ನೇರವಾಗಿ ಇತ್ಯರ್ಥ ಮಾಡಿಕೊಳ್ಳುವ ವ್ಯವಸ್ಥೆಯ (ವಿವಾದ್ ಸೆ ವಿಶ್ವಾಸ್) ಅಡಿಯಲ್ಲಿ ತೆರಿಗೆ ಘೋಷಣೆ ಸಲ್ಲಿಸುವ ಕಂಪನಿಗಳು, ತೆರಿಗೆ ಬಾಕಿ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಪ್ರಮಾಣಪತ್ರ ನೀಡುವವರೆಗೂ ತಾವು ಸಲ್ಲಿಸಿದ ವಿವರಗಳಲ್ಲಿ ಬದಲಾವಣೆ ತರಲು ಅವಕಾಶ ಇದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ತೆರಿಗೆ ವಿಚಾರವಾಗಿ ಆದಾಯ ತೆರಿಗೆ ಇತ್ಯರ್ಥ ಆಯೋಗದ (ಐಟಿಎಸ್‌ಸಿ) ಎದುರು ವಿಚಾರಣೆ ಬಾಕಿ ಇದ್ದಲ್ಲಿ, ಐಟಿಎಸ್‌ಸಿ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಆಗಿದ್ದಲ್ಲಿ ಅಂತಹ ಪ್ರಕರಣಗಳಿಗೆ ಸಂಬಂಧಿಸಿದ ವಿವರಗಳನ್ನು ಮಾರ್ಪಡಿಸಲು ಅವಕಾಶ ಇಲ್ಲ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ವಿವರಣೆ ನೀಡಿದೆ.
ತೆರಿಗೆ ವಿವಾದಗಳ ನೇರ ಇತ್ಯರ್ಥ ವ್ಯವಸ್ಥೆಯ ಅಡಿ, ಮೊತ್ತ ಪಾವತಿಸಲು ಇದ್ದ ಗಡುವನ್ನು ಕೇಂದ್ರ ಸರ್ಕಾರವು ಮಾರ್ಚ್ 31ರವರೆಗೆ ವಿಸ್ತರಿಸಿದೆ. ಆದರೆ, ಇದಕ್ಕೆ ಸಂಬಂಧಿಸಿದ ವಿವರಗಳನ್ನು ಡಿಸೆಂಬರ್ 31ರೊಳಗೆ ಸಲ್ಲಿಸಬೇಕಿದೆ.