ಚಂಡೀಗಡ: ಕೋವಿಡ್-19 ವಿರುದ್ಧದ ಲಸಿಕೆಯ ಟ್ರಯಲ್ ಹಿನ್ನೆಲೆಯಲ್ಲಿ ಕಳೆದ ತಿಂಗಳು ಲಸಿಕೆ ನೀಡಲಾಗಿದ್ದ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ಕೋವಿಡ್-19 ದೃಢಪಟ್ಟಿದೆ. ಅನಿಲ್ ವಿಜ್ ಅವರು ಶನಿವಾರ ಟ್ವೀಟ್ ಮೂಲಕ ಈ ವಿಷಯ ತಿಳಿಸಿದ್ದಾರೆ.
'ನನಗೆ ಕೋವಿಡ್ ದೃಢಪಟ್ಟಿದೆ. ನಾನು ಅಂಬಾಲಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ನಿಕಟ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ' ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ನವೆಂಬರ್ 20ರಂದು ಸಚಿವ ವಿಜ್ ಅವರಿಗೆ ನೀಡಲಾಗಿತ್ತು.