ಕಾಸರಗೋಡು: ಕೋವಿಡ್ ವಿರುದ್ಧ ಸಾರ್ವಜನಿಕರು ನೀಡುತ್ತಿರುವ ಬೆಂಬಲ ಚುನಾವಣೆಯ ಅವಧಿಯಲ್ಲೂ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿನಂತಿಸಿದರು.
ಕಳೆದ ಕೆಲವು ವಾರಗಳಿಂದ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆ ತುಂಬ ಕಡಿಮೆ ವರದಿಯಾಗಿದೆ. ಜಿಲ್ಲೆಯ ಜನತೆಯ ಸಹಕಾರದೊಂದಿಗೆ ಈ ಪರಿಣಾಮ ಸಾಧ್ಯವಾಗಿದೆ. ಕೋವಿಡ್ ರೋಗ ಪೂರ್ಣರೂಪದಲ್ಲಿ ತೊಲಗಿಲ್ಲ, ಮತ್ತೆ ಹರಡುವಿಕೆ ಪ್ರಬಲಗೊಂಡಲ್ಲಿ ಜಿಲ್ಲೆಯಲ್ಲಿ ಭಾರೀ ಮುಗ್ಗಟ್ಟು ತಲೆದೋರುವ ಭೀತಿಯಿದೆ. ಡಿಸೆಂಬರ್ 2ನೇ ವಾರದಲ್ಲಿ ಕೋವಿಡ್ ಸೋಂಕು ಅತ್ಯಧಿಕಗೊಳ್ಳುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ರಾತ್ರಿ ಕಾಲದಲ್ಲಿ ಹೊಟೇಲ್‍ಗಳು ಚಟುವಟಿಕೆ ನಡೆಸಕೂಡದು ಎಂಬ ಆದೇಶ ಪ್ರಕಟಿಸಲಾಗಿದ್ದು, ಎಲ್ಲರ ಸಹಕಾರ ಅಗತ್ಯವಿದೆ ಎಂದವರು ನುಡಿದರು.
ಕಾಸರಗೋಡು ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಕೋವಿಡ್ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಚುನಾವಣೆ ನಡೆಸುವಂತೆ ಚುನಾವಣೆ ಆಯೋಗದ ಆದೇಶ ರಾಜ್ಯ ಸರ್ಕಾರಕ್ಕೆ
ಲಭಿಸಿದೆ. ಇದಕ್ಕಾಗಿ ವಿಸ್ತೃತ ಸಿದ್ಧತೆಗಳನ್ನು, ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ಪಾಸಿಟಿವ್ ಆಗಿರುವ ಮತದಾತರಿಗೆ, ಕ್ವಾರೆಂಟೈನ್‍ನಲ್ಲಿರುವ ಮತದಾತರಿಗೆ ವಿಶೇಷ ಅಂಚೆ ಮತಪತ್ರ ಸೌಲಭ್ಯ ಒದಗಿಸುವ ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ ಮತದಾನ ನಡೆಸುವಂತಾಗಬೇಕು ಎಂಬುದು ಈ ಯತ್ನದ ಉದ್ದೇಶ. ಹಾಗಾದಾಗಲೇ ಪ್ರಜಾಪ್ರಭುತ್ವ ನೀತಿ ಪ್ರಬಲಗೊಳ್ಳುತ್ತದೆ ಎಂದರು.
ರಾಜಕೀಯ ಪಕ್ಷಗಳು ಕೋವಿಡ್ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ ಪ್ರಚಾರ ಚಟುವಟಿಕೆ ನಡೆಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರಚಾರ ಚಟುವಟಿಕೆ ನಡೆಸಕೂಡದು ಎಂಬ ಆದೇಶ ಪ್ರಕಟಿಸಲಾಗಿದೆ. ಬೃಹತ್ ರೀತಿಯ ಪ್ರಚಾರ ಸೌಲಭ್ಯಗಳನ್ನು ಬಳಸಕೂಡದು. ಪ್ರಚಾರ ಸಭೆಗಳಲ್ಲಿ ನೂರಕ್ಕಿಂತ, ಕುಟುಂಬ ಸಭೆಗಳಲ್ಲಿ 20ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಜನ ಗುಂಪುಗೂಡಬಾರದು. ರಾಜಕೀಯ ಪಕ್ಷಗಳು ತುಂಬ ಹೊಣೆಗಾರಿಕೆಯೊಂದಿಗೆ ಈ ವರೆಗೆ ಸಹಕಾರ ನೀಡುತ್ತಾ ಬಂದಿವೆ. ಇನ್ನು ಮುಂದೆಯೂ ಇದೇ ರೀತಿಯ ಬೆಂಬಲ ಬೇಕು ಎಂದವರು ಆಗ್ರಹಿಸಿದರು.