ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ವಾರದ ದಿನಗಳು, ಶನಿವಾರ ಮತ್ತು ಭಾನುವಾರದಂದು ಈಗ ನೀಡಲಾಗುತ್ತಿರುವ ಭಕ್ತರ ಪ್ರವೇಶದ ಅವಕಾಶವನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕೇರಳ ಸರ್ಕಾರವು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ವಾರ್ಷಿಕ ಮಕರವಿಳಕ್ಕು ಅವಧಿಯಲ್ಲಿ ಶಬರಿಮಲೆ ಯಾತ್ರೆಗೆ ತೆರಳಲು ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ. ಕೊರೊನಾ ವೈರಸ್ ಸೋಂಕಿನ ಭೀತಿ, ಅನೇಕ ಕಠಿಣ ನಿಯಮಗಳ ನಡುವೆಯೂ ಭಕ್ತರ ಉತ್ಸಾಹ ಕಡಿಮೆಯಾಗಿಲ್ಲ. ಆದರೆ ಭಕ್ತರಿಗೆ ಗುಂಪು ಗುಂಪಾಗಿ ತೆರಳಲು ಅವಕಾಶ ನೀಡುತ್ತಿಲ್ಲ. ಆರಂಭದಲ್ಲಿ ವಾರದ ದಿನಗಳಲ್ಲಿ 1,000 ಮತ್ತು ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ 2,000 ಭಕ್ತರ ಪ್ರವೇಶಕ್ಕೆ ಇದ್ದ ಮಿತಿಯನ್ನು ಕೆಲವು ದಿನಗಳ ಹಿಂದಷ್ಟೇ ಮತ್ತೆ ಒಂದು ಸಾವಿರದಷ್ಟು ಹೆಚ್ಚಿಸಲಾಗಿತ್ತು.
ಮಂಡಲ-ಮಕರವಿಳಕ್ಕು ಅವಧಿಯಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡ ಶೇ 40 ಭಕ್ತರಿಗೆ ಇನ್ನೂ ಅಲ್ಲಿಗೆ ತೆರಳಲು ಅವಕಾಶ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯ ಮಿತಿಯನ್ನು ಹೆಚ್ಚಿಸಲು ಸರ್ಕಾರ ಮುಂದಾಗಿರುವುದಾಗಿ ತಿಳಿಸಿದೆ.
ಯಾವ ಭಕ್ತರೂ ದೇವಸ್ಥಾನಕ್ಕೆ ಭೇಟಿ ನೀಡದ ದಿನಗಳೂ ಇವೆ. ಈಗಿನ ಸನ್ನಿವೇಶದ ಹಿನ್ನೆಲೆಯಲ್ಲಿ ದೇವಸ್ಥಾನದ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವುದೇ ಸುರಕ್ಷಿತ ಕ್ರಮಗಳಿಗೆ ರಾಜಿಯಾಗದೆ ಭಕ್ತರ ಸಂಖ್ಯೆಯ ಮಿತಿಯನ್ನು ಹೆಚ್ಚಿಸಲು ಸಾಧ್ಯತೆ ಇದೆ ಎಂದು ದೇವಸ್ವಂ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವರದಿಯಲ್ಲಿ ತಿಳಿಸಿದ್ದಾರೆ. ಪ್ರತಿ ದಿನವೂ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರದ ಸುಮಾರು 300-500 ಭಕ್ತರನ್ನು ನಿಳಕ್ಕಳ್‌ನಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ನಿಳಕ್ಕಳ್‌ನಲ್ಲಿ ಇದುವರೆಗೂ 24 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಇವರಲ್ಲಿ ಮೂವರು ಪೊಲೀಸರು, ಇಬ್ಬರು ಟಿಡಿಬಿ ಸಿಬ್ಬಂದಿ ಸೇರಿದ್ದಾರೆ.